ಕೊರೊನಾ ಆತಂಕ ನಡುವೆ ವಿಧಾನಮಂಡಲ ಅಧಿವೇಶನ- ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ರೆಡಿ

ಬೆಂಗಳೂರು: ಇವತ್ತಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಕೊರೊನಾ, ಲಾಕ್‍ಡೌನ್ ಬಳಿಕ ನಡೆಯುತ್ತಿರುವ ವಿಧಾನಮಂಡಲದ ಮೊದಲ ಅಧಿವೇಶನ ಇದಾಗಿದೆ.

ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಿದ್ಧವಾಗಿದ್ದು, ಕೊರೊನಾ ಹಗರಣ, ಕೇಂದ್ರದಿಂದ ಬರಬೇಕಿರುವ ಜಿಎಸ್‍ಟಿ ಪರಿಹಾರ ಬಾಕಿ, ಲಾಕ್‍ಡೌನ್ ಹೊತ್ತಲ್ಲೇ ರೈತರಿಗೆ ಸಂಬಂಧಿಸಿದ ಮಸೂದೆಗಳಿಗೆ ಮಾಡಲಾಗಿರುವ ತಿದ್ದುಪಡಿ. ಏರುತ್ತಿರುವ ಕೊರೋನಾ ಕೇಸ್, ಪ್ರವಾಹ ಪರಿಹಾರ, ಡ್ರಗ್ಸ್ ಕೇಸ್, ಡಿಜೆ ಹಳ್ಳಿ ಕೇಸ್ ಹೀಗೆ ಸರ್ಕಾರದ ವಿರುದ್ಧ ಅಸ್ತ್ರಗಳನ್ನು ಬಳಸಲು ಸಿದ್ಧವಾಗಿವೆ.

ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ರ ತನಕ ಕಲಾಪ ನಡೆಯಲಿದೆ. ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಸದನದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಸೋಂಕು ಭೀತಿಯಿಂದ ಹಲವು ಶಾಸಕರು ಗೈರಾಗುವ ಸಂಭವವೂ ಇದೆ.

ಈ ನಡುವೆ ಆಡಳಿತ ಪಕ್ಷ ಬಿಜೆಪಿಗೂ ಅಗ್ನಿಪರೀಕ್ಷೆಯಾಗಿದ್ದು, ಅಧಿವೇಶನದ ವೇಳೆ ಶಾಸಕರ ಅಸಮಾಧಾನ ತಣ್ಣಗೆ ಆಗುತ್ತಾ, ಜೋರಾಗುತ್ತಾ ಎಂಬ ಕುತೂಹಲವಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ 19 ಸುಗ್ರೀವಾಜ್ಞೆಗಳು ಹಾಗೂ 12 ಮಸೂದೆಗಳು ಸೇರಿದಂತೆ 31ಕ್ಕೂ ಹೆಚ್ಚು ಬಿಲ್ ಮಂಡಿಸಿ ಪಾಸ್ ಮಾಡಿಕೊಳ್ಳಲು ಸರ್ಕಾರ ಪ್ಲ್ಯಾನ್ ಮಾಡಿದೆ.

Comments

Leave a Reply

Your email address will not be published. Required fields are marked *