ಕೊರೊನಾ ಆತಂಕ- ಉಡುಪಿಯ ಹಲವು ಹೋಟೆಲ್‍ಗಳು ಸ್ವಯಂಪ್ರೇರಿತ ಬಂದ್

ಉಡುಪಿ: ಮಹಾಮಾರಿ ಕೊರೊನಾಕ್ಕೆ ಉಡುಪಿ ಜಿಲ್ಲೆಯಲ್ಲಿ ಲಗಾಮು ಬೀಳುತ್ತಿಲ್ಲ. ದಿನಕ್ಕೆ 20-30 ಪಾಸಿಟಿವ್ ಕೇಸ್‍ಗಳು ನಿರಂತರವಾಗಿ ಬರುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,400ರ ಗಡಿ ದಾಟಿದೆ. ಕೊರೊನಾ ಸಮುದಾಯಕ್ಕೆ ಹಬ್ಬಿದೆ ಎಂದು ಆತಂಕಿತರಾದ ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತ ಬಂದ್ ಮಾಡುತ್ತಿದ್ದಾರೆ.

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೊರೊನಾ ಹತೋಟಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಆರಂಭದಿಂದ ಈವರೆಗೂ ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಕೊರೊನಾ ಸಮುದಾಯಕ್ಕೆ ಹಬ್ಬಿದೆ ಅನ್ನುವ ಆತಂಕ ಜನರಲ್ಲಿ ಶುರುವಾಗಿದೆ. ಜಿಲ್ಲೆಯಲ್ಲಿ ಮೂರ್ನಾಲ್ಕು ಹೋಟೆಲ್ ಮಾಲೀಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೆಲ ಸಿಬ್ಬಂದಿಗಳಿಗೂ ಸೋಂಕು ತಗುಲಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಅನ್ಲಾಕ್ ನಂತರ ಹೋಟೆಲ್ ಗಳು ತೆಗೆದುಕೊಳ್ಳುತ್ತಿದ್ದರೂ ಜನ ಹೋಟೆಲ್ ಕಡೆ ಮುಖ ಮಾಡುತ್ತಿಲ್ಲ. ಈ ನಡುವೆ ಹೊಟೆಲ್ ಸಿಬ್ಬಂದಿಗೆ ಕೊರೊನಾ ಆವರಿಸುತ್ತಿರುವುದರಿಂದ ಕೊರೊನಾದ ಸಹವಾಸವೇ ಬೇಡ ಅಂತ ಕೆಲ ಹೋಟೆಲ್ ಮಾಲೀಕರು ಬಂದ್ ಮಾಡುತ್ತಿದ್ದಾರೆ. ಉಡುಪಿ ನಗರದ ಹತ್ತಾರು ಹೋಟೆಲ್ ಗಳು ಈಗಾಗಲೇ ಬಂದಾಗಿದೆ. ಕೆಲ ದಿನಗಳ ಕಾಲ ನಾವು ಬಂದ್ ಇಡುತ್ತೇವೆ ಹೋಟೆಲ್ ಸಿಬ್ಬಂದಿಗೆ, ನಮಗೆ ಕರೋನಾ ಆವರಿಸಿದರೆ ಕಷ್ಟ ಇದೆ. ಮುಂದೆ ವ್ಯಾಪಾರ ಕೂಡ ನಡೆಯಲಿಕ್ಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ಮಾಲೀಕರು ಸಿಬ್ಬಂದಿ, ಅಂಗಡಿಯವರು, ಮಾಲ್, ಸಪ್ಲೈ ವಿಭಾಗದವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ನಾವು ಸರ್ಕಾರದ ವೆಚ್ವದಲ್ಲಿ ಅಂಗಡಿ ಹೊಟೇಲ್ ಮಾಲಕರಿಗೆ ಗಂಟಲ ದ್ರವ ಟೆಸ್ಟ್ ಮಾಡಿಸುತ್ತೇವೆ. ಎಲ್ಲರೂ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಕೊರೊನಾ ಟೆಸ್ಟ್ ಮಾಡಿಸಬೇಕು. ಯಾರಿಗೂ ಅಂಜಿಕೆ ಆತಂಕ ಬೇಡ, ಸಮುದಾಯಕ್ಕೆ ಕೊರೊನಾ ಹಬ್ಬುವುದನ್ನು ತಪ್ಪಿಸಲು ಇದೊಂದು ಪರಿಣಾಮಕಾರಿ ಮಾರ್ಗ ಎಂದರು.

ವ್ಯಾಪಾರ ಇಲ್ಲದೇ ಈಗಾಗಲೇ ನಷ್ಟದಲ್ಲಿರುವ ನಾವು ಇನ್ನು ಕೋವಿಡ್ ತಂದುಕೊಂಡು ಮತ್ತಷ್ಟು ದುಡ್ಡನ್ನು ಆಸ್ಪತ್ರೆಗೆ ಸುರಿಯಲು ಸಿದ್ಧರಿಲ್ಲ ಎಂದು ಹೋಟೆಲ್ ಮಾಲೀಕ ದೇವ್ ತಮ್ಮ ಆತಂಕ ಮತ್ತು ಅಳಲನ್ನು ತೋಡಿಕೊಂಡರು. ಕೊರೊನಾ ಒಂದು ಹಂತಕ್ಕೆ, ಹತೋಟಿಗೆ ಬರುವ ತನಕ ನಾವು ಹೋಟೆಲ್ ತೆರೆಯುವುದಿಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *