ಕೊರೊನಾ, ಅತಿವೃಷ್ಟಿ ಎಲ್ಲಾ ಸಂಕಷ್ಟವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ: ಬಿಎಸ್‍ವೈ

ಶಿವಮೊಗ್ಗ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಗೆ ನೂರಾರು ಗ್ರಾಮಗಳು ಜಲಾವೃತವಾಗಿವೆ. ಅದೇ ರೀತಿ ಬೆಂಗಳೂರಿನಲ್ಲಿ ಸಹ ನಿರೀಕ್ಷೆಗೂ ಮೀರಿ ಮಳೆಯಾಗಿ ಬಹಳ ಅನಾಹುತವಾಗಿದೆ. ಒಂದೆಡೆ ಕೊರೊನಾ ಮತ್ತೊಂದೆಡೆ ಅತಿವೃಷ್ಟಿಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೆಲ್ಲಾವನ್ನು ಎದುರಿಸುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ಎಲ್ಲಾ ಸಂಕಷ್ಟವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಉದ್ಘಾಟನೆ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಮುಂದುವರಿದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಕಳೆದ ನಾಲ್ಕೈದು ದಿನದಲ್ಲಿ ಬೆಂಗಳೂರಿನಲ್ಲಿ ಕಂಡು ಕೇಳರಿಯದ ಮಳೆ ಆಗಿದೆ. ಶನಿವಾರ ಮುಂಜಾನೆಯಿಂದ ಸಂಜೆಯವರೆಗೆ ಹಲವು ವಾರ್ಡ್ ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ವೇಳೆ ಸುಮಾರು 600ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.

ಹಾನಿಗೊಳಗಾದ ಪ್ರತಿಯೊಂದು ಮನೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಚೆಕ್ ವಿತರಣೆ ಸಹ ನಡೆಯುತ್ತಿದೆ. ಸಂಕಷ್ಟ ಬಂದಾಗ ಅದಕ್ಕೆ ಹೆದರಿ ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅದನ್ನು ಎದುರಿಸಿ ಜನರ ಸಮಸ್ಯೆಗೆ ಸ್ಪಂದಿಸಿ ಅವರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಮಾಡುವುದು ಒಬ್ಬ ಮುಖ್ಯಮಂತ್ರಿಯ ಕರ್ತವ್ಯ. ಆ ದಿಕ್ಕಿನಲ್ಲಿ ಎಲ್ಲರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆರ್.ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಹಳ ದೊಡ್ಡ ಅಂತರ ಗೆಲ್ಲುತ್ತಾರೆ. ಅದೇ ರೀತಿ ಶಿರಾದಲ್ಲಿ ಸಹ ನೂರಕ್ಕೆ ನೂರರಷ್ಟು ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ನಾನು ವಿರೋಧ ಪಕ್ಷದ ನಾಯಕರಿಗೆ ವಿಧಾನ ಸಭೆಯಲ್ಲಿ ಒಂದು ಮಾತು ಹೇಳಿದ್ದೆ. ಬರುವಂತಹ ಎಲ್ಲಾ ಚುನಾವಣೆಯಲ್ಲಿ ಗೆಲ್ಲುವುದೇ ನನ್ನ ಗುರಿ ಎಂದಿದ್ದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ದೃಷ್ಟಿಯಿಂದ ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡುತ್ತೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ಇನ್ನು ಎರಡೂವರೆ ವರ್ಷ ಕಾಲ ನಿರಂತರವಾಗಿ ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ ಮಾಡುವುದಾಗಿ ಸಿಎಂ ಬಿಎಸ್‍ವೈ ಹೇಳಿದರು.

Comments

Leave a Reply

Your email address will not be published. Required fields are marked *