ಕೊರೊನಾ ಅಟ್ಟಹಾಸ- ವಿಶ್ವ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನಕ್ಕೆ

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಭಾರತದಲ್ಲಿ ಇನ್ನು ಕೊರೊನಾ ಸ್ಫೋಟಗೊಂಡಿಲ್ಲ. ಲಾಕ್‍ಡೌನ್ ವಿನಾಯತಿ ಹಿನ್ನೆಲೆ ಮುಂದೆ ಈ ಸಾಧ್ಯತೆಗಳು ಹೆಚ್ಚು ಎನ್ನುತ್ತಿದೆ. ಈ ವಾದಗಳ ನಡುವೆ ಇಂದು ಭಾರತ ಮತ್ತೊಂದು ಕೆಟ್ಟ ದಾಖಲೆ ಬರೆಯುವತ್ತ ಹೆಜ್ಜೆ ಹಾಕಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಬಳ್ಳಿ ವೇಗವಾಗಿ ಹಬ್ಬಲು ಶುರುವಾಗಿದೆ. ಲಾಕ್‍ಡೌನ್ ನಿಂದ ರಾಜ್ಯಗಳಿಗೆ ಸೀಮಿತವಾಗಿದ್ದ ಸೋಂಕು, ವಿನಾಯತಿ ಸಿಕ್ಕ ಬಳಿಕ ರಾಜ್ಯಗಳಿಂದ ರಾಜ್ಯಗಳಿಗೆ ಹರಡುವ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ರಾಜಸ್ಥಾನ ಮತ್ತು ಗುಜರಾತ್ ಕೊರೊನಾ ತಾಯಿ ಬೇರಿನಂತೆ ಇತರೆ ರಾಜ್ಯಗಳಿಗೆ ಸೋಂಕು ಹಬ್ಬಿಸುತ್ತಿದೆ. ದೇಶದಲ್ಲಿ ಸದ್ಯ ಇದೇ ರಾಜ್ಯಗಳಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.

ಹೀಗೆ ದೇಶದಲ್ಲಿ ಗಗನ ಮುಖಿ ಏರುತ್ತಿರುವ ಸೋಂಕು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಪ್ರತಿ ನಿತ್ಯ ಭಾರತದಲ್ಲಿ 8-10 ಸಾವಿರ ಕೇಸ್ ಗಳು ಪತ್ತೆಯಾಗುತ್ತಿದ್ದು, ಇಂದಿನ ಹೆಲ್ತ್ ಬುಲೆಟಿನ್ ಬಳಿಕ ಭಾರತ ಮತ್ತೊಂದು ಕೆಟ್ಟ ದಾಖಲೆ ಬರೆಯಲಿದೆ. ಹೌದು ಭಾರತ ಇಂದು ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳ ಟಾಪ್ 5 ಸ್ಥಾನಕ್ಕೆ ಸೇರ್ಪಡೆಯಾಗಲಿದ್ದು, ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸೋಂಕಿತರಿರುವ ದೇಶ ಎನ್ನುವ ಕುಖ್ಯಾತಿಗೆ ಒಳಗಾಗಲಿದೆ.

ಕೊರೊನಾ ಸೋಂಕಿತರಿರುವ ಟಾಪ್ 5 ದೇಶಗಳು
1. ಅಮೆರಿಕಾ – 18,97,239
2. ಬ್ರೆಜಿಲ್ – 6,14, 941
3. ರಷ್ಯಾ – 4.49.256
4. ಇಂಗ್ಲೆಂಡ್ – 2.84.734
5. ಸ್ಪೇನ್ – 2.40.978
6. ಭಾರತ – 2.36.531

ಸದ್ಯ ಭಾರತ ಅತಿ ಹೆಚ್ಚು ಸೋಂಕಿತರು ಹೊಂದಿರುವ ರಾಷ್ಟ್ರಗಳ ಪೈಕಿ ಆರನೇ ಸ್ಥಾನದಲ್ಲಿದೆ. ಇಂದು ಬೆಳಗಿನ ವರದಿಗೆ ಬಹುತೇಕ 8-10 ಪ್ರಕರಣಗಳು ಪತ್ತೆಯಾಗಲಿದ್ದು ಸ್ಪೇನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲಿದೆ. ಸ್ಪೇನ್ ನಲ್ಲಿ ಸೋಂಕು ಹತೋಟಿಯಲ್ಲಿದ್ದು ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಅನುಮಾನ. ಹೀಗಾಗಿ ಸ್ಪೇನ್ ಭಾರತಕ್ಕೆ ಪೈಪೋಟಿ ನೀಡುವುದು ಅನುಮಾನ.

ಈಗಾಗಲೇ ಭಾರತ ನೋಡನೋಡುತ್ತಿದ್ದಂತೆ ಇಟಲಿ, ಫ್ರಾನ್ಸ್, ಪೇರು, ಜರ್ಮಿನಿ, ಟರ್ಕಿ ಇರಾನ್, ಮೆಕ್ಸಿಕೊ ಹಿಂದಿಕ್ಕಿ ಮುಂದೆ ಸಾಗುತ್ತಲೇ ಇದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಇನ್ನು ಕೊರೊನಾ ಸ್ಫೋಟವಾಗಿಲ್ಲ ಎಂದು ಹೇಳಿಕ ನೀಡಿದೆ. ಆದರೆ ಲಾಕ್‍ಡೌನ್ ವಿನಾಯತಿ ನೀಡಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಸ್ಫೋಟವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ಒಂದು ವೇಳೆ ಕೊರೊನಾ ಸ್ಫೋಟವಾದ್ರೆ ಭಾರತ ಅಮೆರಿಕಕ್ಕೆ ಪೈಪೋಟಿ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಲಾಕ್‍ಡೌನ್ ವಿನಾಯತಿ ಸಾಕಷ್ಟು ಆತಂಕ ಸೃಷ್ಟಿ ಮಾಡಿದೆ.

Comments

Leave a Reply

Your email address will not be published. Required fields are marked *