ಕೊರೊನಾದಿಂದ ಪಾರಾಗಲು ಪೂಜೆ, ಪುನಸ್ಕಾರ – ಹಳ್ಳಿಗಳಲ್ಲಿ ನಡೀತಿದೆ ಶಾಂತಿ ಪೂಜೆ, ಹೋಮ

ಬೆಂಗಳೂರು: ಕೊರೊನಾ ಜನರನ್ನ ಅದೆಷ್ಟು ದಿಕ್ಕೆಟ್ಟಿಸಿದೆ ಅಂದ್ರೆ ಏನು ಮಾಡಬೇಕು ಏನು ಮಾಡಬಾರದು ಅನ್ನೋವಷ್ಟು ತಲೆ ಕೆಟ್ಟು ಹೋಗಿದೆ. ಮನೇಲಿದ್ರೂ ಕೊರೊನಾ, ಮನೆಯಿಂದಾಚೆ ಇದ್ರೂ ಕೊರೊನಾ..?. ಹೀಗೆ ಎಲ್ಲಿ ನೋಡಿದ್ರೂ ಕೊರೊನಾ ಕೊರೊನಾ ಅಂತ ಕೇಳಿ ಇದೀಗ ತಲೆಯಲ್ಲಿ ಏನೇನೋ ಯೋಚನೆ ಮೂಡೋಕೆ ಶುರುವಾಗಿದೆ. ಹಾಗಾಗೇ ಇದೀಗ ರಾಜ್ಯಾದ್ಯಂತ ಕೊರೊನಾ ಮೌಢ್ಯಾಚರಣೆಗಳು ಶುರುವಾಗಿದೆ.

ತಮಿಳುನಾಡಿನಲ್ಲೊಂದು ಕೊರೊನಾ ದೇವಾಲಯ ಉದ್ಭವ ಆಗಿದ್ದೇ ತಡ, ಇದಿಗ ರಾಜ್ಯದಲ್ಲೂ ಎಲ್ಲಿ ನೋಡಿದ್ರೂ ಕೊರೊನಾಮ್ಮನ ವಿಗ್ರಹಗಳು ಮೂರ್ತಿಗಳು ತಲೆ ಎತ್ತೋಕೆ ಶುರುವಾಗಿವೆ. ಮೊನ್ನೆ ಮೊನ್ನೆಯಷ್ಟೆ ಚಾಮರಾಜನಗರದಲ್ಲಿ ದೇವಿ ಭಕ್ತೆಯೊಬ್ಬಳು ಕಲ್ಲೊಂದರಲ್ಲಿ ಕೊರೊನಾ ದೇವಿ ಸೃಷ್ಠಿಸಿ ಅದಕ್ಕೆ ಅರಿಶಿನ ಕುಂಕುಮ ಎಲ್ಲಾ ಇಟ್ಟು ಪುಟ್ಟದಾದ ಗುಡಿ ನಿರ್ಮಿಸಿಬಿಟ್ಟಿದ್ದರು. 12 ದಿನಗಳ ಕಾಲ ಈ ಕಲ್ಲಿನ ಮೂರ್ತಿಗೆ ಪೂಜೆ ಮಾಡುವಂತೆ ಕರೆ ನೀಡಿದ್ರು. ಆದರೆ ವಿಷ್ಯ ಗೊತ್ತಾಗ್ತಿದ್ದಾಗೆ ಚಾಮರಾಜನಗರದ ಜಿಲ್ಲಾಧಿಕಾರಿಗಳು ಇದನ್ನ ತೆರವು ಮಾಡಿದ್ದಾರಂತೆ. ಆದರೂ ರಾಜ್ಯದ ನಾನಾ ಕಡೆಗಳಲ್ಲಿ ಕೊರೊನಾ ಮೌಡ್ಯಾಚರಣೆಗೇನು ಕಮ್ಮಿ ಇಲ್ಲದಂತಾಗಿದೆ.

ದುರ್ಗಾದೇವಿಗೆ 21 ಗಂಡು ಮೇಕೆ ಬಲಿ ಕೊಡಬೇಕಂತೆ!:
ಕೊರೊನಾ ಅಂತ್ಯಕ್ಕೆ 21 ಗಂಡು ಮೇಕೆಗಳ ಬಲಿ ಆಗಬೇಕಂತೆ. ಅದೂ ಎಲ್ಲಾ ಒಂದೊಂದು ಗಂಡು ಮೇಕೆಯೂ 17 ಸಾವಿರ ರೂ ಬೆಲೆಬಾಳೋದೇ ಆಗಬೇಕಂತೆ. ಹೀಗಂತ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಕನೂರು ಗ್ರಾಮದಲ್ಲಿ ಕರಿಸಿದ್ದೇಶ್ವರ ದೇವಸ್ಥಾನದ ಅರ್ಚಕರೊಬ್ಬರು ಕರೆ ನೀಡಿದ್ದಾರೆ.

ಅದ್ಯಾರು ಇವರಿಗೆ ಮೇಕೆ ಬಲಿ ಕೊಟ್ರೆ ಕೊರೊನಾ ಹೋಗುತ್ತೆ ಅಂತ ಹೇಳಿದ್ರೋ ಗೊತ್ತಿಲ್ಲ. ಒಟ್ಟಿನಲ್ಲಿ ಗ್ರಾಮಸ್ಥರೆಲ್ಲಾ ಶಿಘ್ರದಲ್ಲೇ ಜಾತ್ರೆ ಮಾಡಿ ಮೇಕೆ ಬಲಿ ಕೊಡೋಕೆ ಮುಂದಾಗಿದ್ದಾರೆ. ಸದ್ಯ ಸರ್ಕಾರ ಈ ಕೊರೊನಾ ನಿಯಂತ್ರಣಕ್ಕಾಗಿ ಜಾತ್ರೆಗಳನ್ನೆಲ್ಲಾ ರದ್ದು ಮಾಡಿದೆ. ಆದರೂ ಇವರು ಮಾತ್ರ ಜಾತ್ರೆ ಮಾಡೋಕೆ ಸ್ಕೆಚ್ ಹಾಕ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಪಾಶ್ಚಾಪೂರ ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ಗಣ ಹೋಮ ಸೇರಿದಂತೆ ವಿವಿಧ ಹೋಮಗಳನ್ನು ನಡೆಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮ. ಇಲ್ಲಿ ಕೇವಲ 25 ದಿನದಲ್ಲಿ 15 ಮಂದಿಯ ಸರಣಿ ಸಾವಾಗಿದೆ. ಆದರೂ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಇಲ್ಲಿನ ಜನ ಜೀವ ಉಳಿಸಿಕೊಳ್ಳೋಕೆ ಕಂದಾಚಾರದ ಮೊರೆ ಹೋಗಿದ್ದಾರೆ. ಗ್ರಾಮದ ನಾಲ್ಕೂ ದಿಕ್ಕಿಗೂ ಒಂದು ಬಂಬು ನಿಲ್ಲಿಸಿ ಅದಕ್ಕೆ ಪೂಜೆ ಮಾಡಿ ಮಂತ್ರಿಸಿದ ತೆಂಗಿನ ಕಾಯಿ ಕಟ್ಟಿ ದಿಗ್ಭಂಧನ ಹಾಕಿದ್ದಾರೆ.

 

ಹಾವೇರಿಯ ಕರ್ಜಗಿ ಗ್ರಾಮದಲ್ಲಿ ಕೊರೊನಾ ದೇವಿ ವಿಗ್ರಹ ಮಾಡಿ ಬಳೆ, ಬಾಳೆ ಹಣ್ಣು, ತಾಳಿ, ಎಳನೀರು, ನೂರಾರು ಮರಗಳು, ಮಡಿಕೆಗಳು ಸೇರಿದಂತೆ ಪೂಜೆ ಸಾಮಾಗ್ರಿಗಳನ್ನ ಇಟ್ಟು ವಾಮಾಚಾರ ಮಾಡಿ ಹೋಗಿದ್ದಾರೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಭಕ್ತರು ಮನೆಗಳ ಮುಂದೆ ಸಗಣಿ ಸಾರಿಸಿ ರಂಗೋಲಿ ಇಟ್ಟು ಮಧ್ಯೆ ಹಳ್ಳ ತೆಗೆದು ಸುತ್ತಲೂ ಬಲಿ ಅನ್ನ ಇಟ್ಟು ಹಳ್ಳಕ್ಕೆ ಕೆಂಡ ಸುರಿದು ದೂಪ ಹಾಕಿ ಪೂಜೆ ಮಾಡ್ತಿದ್ದಾರೆ.

ಮಣ್ಣಿನ ಕುಡಿಕೆಗೆ ಹಸಿರು ಬಳೆ.. ಊರ ಹೊರಗೆ ಎಡೆ!:
ದಾವಣಗೆರೆ ಮಂದಿ ಮಣ್ಣಿನ ಕುಡಿಕೆ ಮಾಡಿ ಅದರಲ್ಲಿ ಹಸಿರು ಬಳೆ ಇಟ್ಟು ಅರಿಶಿಣ ಕುಂಕುಮ ಇಟ್ಟು, ಬೇವಿನ ಸೊಪ್ಪಿನ ಜೊತೆ ಅನ್ನದ ಎಡೆಯನ್ನೂ ರೆಡಿ ಮಾಡಿ, ಸಂತೃಪ್ತಳಾಗು ಕೊರೊನಾ ತಾಯೇ ಅಂತ ಊರ ಹೊರಗೆ ಕುಡಿಕೆ ಮತ್ತು ಎಡೆ ಇಟ್ಟು ಬರ್ತಿದ್ದಾರೆ. ತುಮಕೂರಿನ ಪಾವಗಡ ತಾಲೂಕಿನ ಕೆ.ರಾಮಪುರ ಗ್ರಾಮಸ್ಥರು ಈ ಕೊರೊನಾದಿಂದ ಮುಕ್ತಿ ಹೊಂದಲು ಗ್ರಾಮ ಸಮೀಪದ ಹನುಮನ ಬೆಟ್ಟದಲ್ಲಿನ ಗ್ರಾಮ ರಕ್ಷಣಾ ಕಲ್ಲಿಗೆ 101 ಬಿಂದಿಗೆ ನೀರು, 101 ನಿಂಬೆಕಾಯಿ ಹಾಕಿ ಪೂಜೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕ್ಯಾತನಕೆರೆ ಗ್ರಾಮದಲ್ಲಿ ಕೊರೊನಾ ದೇವಿಯ ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಕೆಂಪು ಸೀರೆ ಉಡಿಸಿ, ತಾಳಿಯನೂ ಕಟ್ಟಿ ಆಡು ಬಲಿ ಕೊಟ್ಟು ರಕ್ತಾಭಿಷೇಕವನ್ನೂ ಮಾಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮ ಪಂಚಾಯ್ತಿಯ ಸಹಾಯಕ ಪಾಂಡುಸಿಂಗ್ ರಜಪೂತ್ ಗ್ರಾಮದಲ್ಲಿರುವ ಲಕ್ಷ್ಮಿನರಸಿಂಹ, ಹನುಮಂತ, ವೆಂಕಟೇಶ್ವರ, ಯಲ್ಲಮ ಸೇರಿದಂತೆ 20 ದೇವಸ್ಥಾನಗಳಿಗೂ ಕೈ ಮುಗಿದು ಬೇಡಿಕೊಂಡಿದ್ದಾನೆ. ಉರುಳು ಸೇವೆ ಮಾಡಿ, ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ದೀರ್ಘದಂಡ ನಮಸ್ಕಾರ ಹಾಕಿದ್ದಾನೆ.

ಕೊರೊನಾ ಮಾರಿ ತೊಲಗಲು 3 ದಿನ ಪಾರಾಯಣ..!:
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪೂರದ ದತ್ತಾತ್ರೇಯ ದೇವಾಲಯದ ಅರ್ಚಕರೂ ಕೊರೊನಾ ಮಹಾಮಾರಿ ತೊಲಗಿ ನಾಡಿಗೆ ಒಳಿತಾಗಲಿ ಎಂದು 3 ದಿನಗಳ ಕಾಲ ಪಾರಾಯಣ ಹಮ್ಮಿಕೊಂಡಿದ್ದಾರೆ.

ಭಗವಂತ ಅದ್ಯಾವ ರೀತಿಯ ಭಕ್ತಿಗೆ ಮೊರೆ ಹೋಗ್ತಾನೋ ಏನೋ ಗೊತ್ತಿಲ್ಲ. ಸದ್ಯ ಈ ಕೊರೊನಾ ಎರಡನೇ ಅಲೆಯಲ್ಲಿ ಜನ ನಾನಾ ಕಸರತ್ತು ಮಡೋಕೆ ಮುಂದಾಗಿದ್ದಾರೆ. ಕೆಲವರು ವಾಮಾಚಾರ ಮಾಟ ಮಂತ್ರದ ಮೊರೆ ಹೋದ್ರೆ ಕೆಲವರು ಹರಕೆ ಕಟ್ಟಿಕೊಂಡು ದೀರ್ಘ ದಂಡ ನಮಸ್ಕಾರ ಹಾಕ್ತಿದ್ದಾರೆ, ಉರುಳು ಸೇವೆ ಮಾಡ್ತಿದ್ದಾರೆ. ಹೋಮ ಹವನಗಳನ್ನ ಹಮ್ಮಿಕೊಳ್ತಿದ್ದಾರೆ. ಹಾಗೇ ಪಾರಾಯಣ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *