ಕೊರೊನಾಗೆ ಸಿಕ್ತು ಫೈಜರ್‌ ಲಸಿಕೆ – ಮುಂದಿನ ವಾರದಿಂದ ಬಳಕೆಗೆ ಅನುಮತಿ

ಲಂಡನ್‌: ಕೊರೊನಾ ವೈರಸ್‌ಗೆ ಕೊನೆಗೂ ಲಸಿಕೆ ಸಿಕ್ಕಿದೆ.  ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್‌ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಬಳಸಲು ಇಂಗ್ಲೆಂಡ್‌ ಸರ್ಕಾರ ಅನುಮತಿ ನೀಡಿದೆ.

ತಾನು ತಯಾರಿಸಿದ ಕೊರೊನಾ ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದು ನ.18 ರಂದು ಕಂಪನಿ ಅಧಿಕೃತವಾಗಿ ತಿಳಿಸಿತ್ತು. ಈ ಹೇಳಿಕೆಯ ಬೆನ್ನಲ್ಲೇ ಇಂಗ್ಲೆಂಡ್‌ ಸರ್ಕಾರ ಮುಂದಿನ ವಾರದಿಂದಲೇ ಲಸಿಕೆ ವಿತರಿಸಲು ಅನುಮತಿ ನೀಡಿದೆ.

ಇಂಗ್ಲೆಂಡ್‌ ಸರ್ಕಾರ ಈಗಾಗಲೇ 4 ಕೋಟಿ ಡೋಸ್‌ಗಳಿಗೆ ಆರ್ಡರ್‌ ಮಾಡಿದ್ದು 2 ಕೋಟಿ ಜನರಿಗೆ 2 ಡೋಸ್‌ ನೀಡಬಹುದಾಗಿದೆ. ಆರಂಭದಲ್ಲಿ 1 ಕೋಟಿ ಲಸಿಕೆ ಬರಲಿದ್ದು, ಈ ಪೈಕಿ ಮುಂದಿನ ಕೆಲ ದಿನದಲ್ಲಿ 8 ಲಕ್ಷ ಲಸಿಕೆ ಇಂಗ್ಲೆಂಡ್‌ಗೆ ಬರಲಿದೆ.

ಲಸಿಕೆ ಹೇಗಿದೆ?
ಜರ್ಮನ್‌ ಪಾಲುದಾರ ಬಯೋ ಆಂಡ್‌ ಟೆಕ್‌ ಜೊತೆ ಅಭಿವೃದ್ಧಿಪಡಿಸಿದ ಫೈಜರ್‌ ಲಸಿಕೆ ಕ್ಲಿನಿಕಲ್‌ ಟ್ರಯಲ್‌ ವೇಳೆ ಎಲ್ಲಾ ವಯೋಮಾನ ಮತ್ತು ಜನಾಂಗೀಯದವರಲ್ಲಿ ಸ್ಥಿರವಾಗಿದ್ದು, ಯಾವುದೇ ಪ್ರಮುಖ ಅಡ್ಡ ಪರಿಣಾಮಗಳಿಲ್ಲ ಎಂದು ತಿಳಿಸಿತ್ತು.

170 ದೃಢಪಟ್ಟ ಕೊರೊನಾ ಪ್ರಕರಣಗಳನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ಲಸಿಕೆ ಕ್ಯಾಂಡಿಡೇಟ್‌ ‘BNT162b2’ ಮೊದಲ ಡೋಸ್ ನೀಡಿದ 28 ದಿನಗಳ ನಂತರ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದು ಫೈಜರ್ ಹೇಳಿತ್ತು.  ಫೈಜರ್‌ ಬಳಕೆಗೆ ಸಿಕ್ಕಿದರೂ ಲಸಿಕೆಯನ್ನು ಮೈನಸ್‌ 70 ಡಿಗ್ರಿಯಲ್ಲಿ ಶೇಖರಿಸಿ ಇಡಬೇಕಾಗುತ್ತದೆ. ಇದು ಬಹಳ ಸವಾಲಿನ ಕೆಲಸ.  ಇದನ್ನೂ ಓದಿ: ಕೊರೊನಾ ಲಸಿಕೆ ವಿತರಣೆ ಹೇಳಿದಷ್ಟು ಸುಲಭವಲ್ಲ – ಏನಿದು ಕೋಲ್ಡ್‌ ಚೈನ್‌? ಸವಾಲು ಏನು?

ಇಂಗ್ಲೆಂಡ್‌ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್‌ಹ್ಯಾನ್‌ಕಾಕ್ ಅವರು ಟ್ವೀಟ್‌ ಮಾಡಿ, ಮುಂದಿನ ವಾರ ಲಸಿಕೆಯನ್ನು ಜನರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *