ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಪ್ರಾರಂಭವಾಗಿರುವುದರಿಂದ ಲಾಕ್‍ಡೌನ್ ಮಾಡಿ ಏನು ಪ್ರಯೋಜನ ಇಲ್ಲ. ಇದರ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ ಡಿ.ಕೆ ಶಿವಕುಮಾರ್, ನನ್ನ ವೈಯುಕ್ತಿಕ ಅಭಿಪ್ರಾಯ ಲಾಕ್‍ಡೌನ್ ಬೇಡ. ಲಾಕ್‍ಡೌನ್ ಗಿಂತ ಜೀವ ಹಾಗೂ ಜೀವನ ಮುಖ್ಯ. ಸರ್ಕಾರ ಅವರದೇನೋ ಮುಚ್ಚಿಕೊಳ್ಳೋಕೆ ಲಾಕ್‍ಡೌನ್ ಮತ್ತೊಂದು ಎಂಬ ಸುದ್ದಿ ಹಬ್ಬಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ನಮಗಿನ್ನು ಸರ್ವ ಪಕ್ಷಗಳ ಸಭೆಯ ನೋಟಿಸ್ ಬಂದಿಲ್ಲ. ಬಂದ ನಂತರ ಪಕ್ಷದ ನಾಯಕರುಗಳು ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈ ಹಿಂದೆ ನಾವು ಕೊಟ್ಟ ಸಲಹೆಗಳನ್ನು ಅವರು ಪಾಲಿಸಿಲ್ಲ. ಅವರಿಗೆ ಏನ್ ಬೇಕು ಅದನ್ನು ಮಾಡಿಕೊಂಡಿದ್ದರು ಮತ್ತು ಕೊರೊನಾ ಸಂದರ್ಭದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನನ್ನ ವೈಯುಕ್ತಿಕ ಅಭಿಪ್ರಾಯ ಲಾಕ್ ಡೌನ್ ಮಾಡಬಾರದು. ಲಾಕ್‍ಡೌನ್ ಮಾಡಿದರೆ ಜನ ಮನೆಯಿಂದ ಹೊರ ಬರುವುದಂತು ಬಂದೆ ಬರುತ್ತಾರೆ. ಸರ್ಕಾರ ಕಂಪನಿಗಳಿಗೆ ಮತ್ತು ಅಲ್ಲಿನ ನೌಕರರಿಗೆ ಸಹಾಯ ಮಾಡಿಲ್ಲ, ಅವರ ಮನೆಯ ಬಾಡಿಗಳನ್ನು ಕಟ್ಟಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರ ಮಾದರಿ ಅಥವ ಬೇರೆಯಾವುದೆ ಮಾದರಿಯ ಬಗ್ಗೆ ನಾನು ಮಾತನಾಡುವುದಿಲ್ಲ, ಸರ್ಕಾರ ನಮ್ಮನ್ನು ಕರೆಸಿ ಮಾತನಾಡಿದ ಮೇಲೆ ನಮ್ಮ ಸಲಹೆಯನ್ನು ಪರಿಗಣಿಸಬೇಕು ಸುಮ್ಮನೆ ಸಭೆ ನಡೆಸಿ ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳೋದಲ್ಲ ಎಂದರು.
ದೇಶದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಇದನ್ನೆಲ್ಲ ಸರ್ಕಾರ ಗಮನಹರಿಸಬೇಕು. ಇದರಿಂದ ಜನಸಾಮಾನ್ಯರು ಜೀವನ ನಡೆಸಲು ಪರದಾಡುತ್ತಿದ್ದಾರೆ ಎಂದು ತಿಳಿಸಿದರು.

Leave a Reply