ಕೊರೊನಾಗೆ ಇಂಜೆಕ್ಷನ್ ಕೊಟ್ಟ ಕಲಾವಿದರು – ಕುಂದಾಪುರ ಕೋಡಿಯಲ್ಲಿ ವಿಭಿನ್ನ ಮರಳು ಶಿಲ್ಪ

ಉಡುಪಿ: ಕೊರೊನಾ ರೋಗಕ್ಕೆ ಇಂಜೆಕ್ಷನ್ ಕೊಡಲಾಗಿದೆ. ಕನ್ ಫ್ಯೂಸ್ ಆಗಬೇಡಿ, ಇದು ಮರಳಿನಲ್ಲಿ ಮೂಡಿಬಂದ ವಿಭಿನ್ನ ಕಲಾಕೃತಿ.

ಹೌದು. ಮಹಾಮಾರಿ ಕೊರೊನಾದ ವಿರುದ್ಧ ಇಂದು ದೇಶಾದ್ಯಂತ ಲಸಿಕೆ ಹಂಚಿಕೆಯಾಗಿದೆ. ಕೊರೊನಾದ ಫ್ರಂಟ್ ಲೈನ್ ವಾರಿಯರ್ ಗಳು ಕೋವಿಶೀಲ್ಡ್, ಕೋವ್ಯಾಕ್ಸಿನ್ ಚುಚ್ಚಿಸಿಕೊಂಡಿದ್ದಾರೆ. ಭಾರತೀಯ ವೈದ್ಯರು ಮತ್ತು ಸಂಶೋಧಕರ ಸಾಧನೆ, ಸರ್ಕಾರದ ಕಾರ್ಯಚಟುವಟಿಕೆಗೆ ಉಡುಪಿಯ ಸ್ಟ್ಯಾಂಡ್ ಟೀಮ್ ವಿಭಿನ್ನವಾಗಿ ಶ್ಲಾಘಿಸಿದೆ. ಬೃಹತ್ ಮರಳು ಶಿಲ್ಪದ ಮೂಲಕ ವ್ಯಾಕ್ಸಿನನ್ನು ಸ್ವಾಗತಿಸಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಡಿ ಬೀಚಿನಲ್ಲಿ ಬೃಹತ್ ಮರಳು ಶಿಲ್ಪ ಮಾಡಿರುವ ಸ್ಯಾಂಡ್ ಆರ್ಟ್ ತಂಡ ಮರಳಲ್ಲಿ ಭೂಗೋಳ, ಭಾರತವನ್ನು ರಚಿಸಿದ್ದಾರೆ. ಕೊರೊನಾ ರೋಗಕ್ಕೆ ಇಂಜೆಕ್ಷನ್ ಕೊಡುವ ಮಾದರಿ, ವ್ಯಾಕ್ಸಿನ್, ಸಿರಿಂಜ್ ಆಕೃತಿಯನ್ನು ರಚಿಸಿದ್ದಾರೆ. ತಂಡದಲ್ಲಿ ಹರೀಶ್ ಸಾಗಾ, ರಾಘವೇಂದ್ರ ಮತ್ತು ಜೈ ನೇರಳಕಟ್ಟೆ ಸುಮಾರು ಐದು ಗಂಟೆಗಳ ಕಾಲ ದುಡಿದಿದ್ದಾರೆ.

ಕಲಾವಿದ ಹರೀಶ್ ಸಾಗಾ ಮಾತನಾಡಿ, ಕೊರೊನಾ ಎಲ್ಲಾ ಕ್ಷೇತ್ರದಲ್ಲಿ ಅವಾಂತರ ಮಾಡಿದೆ. ಈಗ ವ್ಯಾಕ್ಸಿನ್ ಬಂದಿದೆ. ಮಾಸ್ಕ್ ಕಳಚುವ ಪರಿಸ್ಥಿತಿ ನಿರ್ಮಾಣವಾಗಲಿ. ಜನ ನಿಶ್ಚಿಂತವಾಗಿ ಓಡಾಡುವಂತಾಗಲಿ ಎಂಬುದನ್ನು ಮರಳುಶಿಲ್ಪದ ಮೂಲಕ ರಚಿಸಿದ್ದೇವೆ. ಲಸಿಕೆ ಸಂಶೋಧನೆ ಮಾಡಿದ ಎಲ್ಲರಿಗೆ ಇದು ಅರ್ಪಣೆ ಮಾಡಿರುವುದಾಗಿ ಹೇಳಿದರು.

ಕಲಾವಿದ ಜೈ ನೇರಳಕಟ್ಟೆ ಮಾತನಾಡಿ, ಮರಳ ಶಿಲ್ಪದಲ್ಲಿ ಕೊರೊನಾ ಕಾಡಿದ ಭೂಮಿ, ಕೊರೊನಾ ಗೆದ್ದ ಭಾರತ, ಲಸಿಕೆ, ಸಿರೀಂಜ್, ಮಾಸ್ಕ್, ಕೊರೊನಾ ರಾಕ್ಷಸನನ್ನು ರಚಿಸಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *