ಕೊಬ್ಬರಿಗೆ ಸಹಾಯ ಧನ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ಶಿವಲಿಂಗೇಗೌಡ ಎಚ್ಚರಿಕೆ

– ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ

ಹಾಸನ: ಕೊಬ್ಬರಿಗೆ ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ 1,200 ರೂಪಾಯಿ ಸಹಾಯ ಧನ ನೀಡದಿದ್ದರೆ ಸಿಎಂ ಯಡಿಯೂರಪ್ಪ ಮನೆಮುಂದೆ ಹೋಗಿ ಧಿಕ್ಕಾರ ಕೂಗುತ್ತೇನೆ. ಜೊತೆಗೆ ಅವರ ಮನೆ ಮುಂದೆ ಕುಳಿತು ಹೋರಾಟ ಮಾಡುವುದಾಗಿ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.

ಕೊಬ್ಬರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡಬೇಕು ಮತ್ತು ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳುವ ಅವಧಿ ವಿಸ್ತರಣೆ ಮಾಡಬೇಕು ಎಂದು ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ಶಾಸಕರು ನಫೆಡ್‍ನಲ್ಲಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳಲು ಕೇವಲ 800 ಜನ ರೈತರ ಹೆಸರು ನೋಂದಣಿ ಮಾಡಿಕೊಂಡು ನೋಂದಣಿ ಸಮಯ ಮುಗಿದಿದೆ ಅಂತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಕೊರೊನಾ ಇಲ್ಲದಿದ್ದರೆ ಬಸ್ ನಿಲ್ಲಿಸಿ, ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಏನು ಎಚ್ಚರಿಕೆ ನೀಡಬೇಕೋ ನೀಡುತ್ತಿದ್ದೆವು. ಗೌರವದಿಂದ ಬೀದಿಯಲ್ಲಿ ನಡೆದು ಬಂದು ನಿಮ್ಮ ಮಾನ ಮರ್ಯಾದೆ ಉಳಿಸಿದ್ದೇವೆ. ಕೂಡಲೇ ಕೊಬ್ಬರಿಗೆ ರಾಜ್ಯ ಸರ್ಕಾರ 1,200 ಪ್ರೋತ್ಸಾಹ ಧನ ನೀಡಿ ರೈತರ ಹಿತ ಕಾಯಬೇಕು ಎಂದು ಶಾಸಕ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ರಾಜಕೀಯದ ಬಗ್ಗೆ ಆಕ್ರೋಶ ಹೊರಹಾಕಿದ ಶಾಸಕರು, ಈ ರಾಜಕೀಯದ ಬಗ್ಗೆ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಇದು ಕೆಟ್ಟ ರಾಜಕಾರಣ. ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ ಎಂದರು.

ಇಂದಿರಾಗಾಂಧಿ ಎಮರ್ಜೆನ್ಸಿ ಡಿಕ್ಲೇರ್ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಪ್ರತಿಫಲ ಅನುಭವಿಸಿದ್ದಾರೆ. ಇವರು ಅನುಭವಿಸುವುದಾದರೆ ಅನುಭವಿಸಲಿ. ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಇವರ್ಯಾರಿಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎನಿಸುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಆ ಬಗ್ಗೆ ಮಾತನಾಡಲು ಮನಸ್ಸಿಗೆ ಬೇಸರ ಮತ್ತು ಸಂಕಟ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

Comments

Leave a Reply

Your email address will not be published. Required fields are marked *