ಕೊನೆಗೂ ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ- ಐಪಿಎಲ್ ಹಾದಿ ಸುಗಮ

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2020ರ ಟಿ20 ವಿಶ್ವಕಪ್ ಭವಿಷ್ಯದ ಕುರಿತು ಚರ್ಚೆ ನಡೆಸಲು ಮೊದಲ ಸಭೆ ನಡೆಸಿದ 50 ದಿನಗಳ ಬಳಿಕ ಟೂರ್ನಿಯನ್ನು ಮುಂದೂಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರೊಂದಿಗೆ ಐಪಿಎಲ್ ಆಯೋಜಿಸಲು ಬಿಸಿಸಿಐ ಹಾದಿ ಸುಗಮವಾಗಿದೆ.

ಐಸಿಸಿ ಟೂರ್ನಿಗಳ ಕುರಿತು ಹಲವು ಮಹತ್ವ ಘೋಷಣೆಗಳನ್ನು ಮಾಡಿರುವ ಸಮಿತಿ, ಪುರುಷರ ಟಿ20 ವಿಶ್ವಕಪ್ 2021 ಅಕ್ಟೋಬರ್-ನವೆಂಬರ್ ನಡೆಯಲಿದೆ. ಟೂರ್ನಿಯ ಫೈನಲ್ ಪಂದ್ಯ ನ.14 ರಂದು ನಡೆಯುವುದಾಗಿ ಹೇಳಿದೆ. ಪುರುಷರ ಟಿ20 ವಿಶ್ವಕಪ್-2022 ಟೂರ್ನಿ ಅಕ್ಟೋಬರ್-ನವೆಂಬರ್ ನಡೆಯಲಿದ್ದು, ನ.13 ರಂದು ಫೈನಲ್ ಪಂದ್ಯ ನಡೆಯಲಿದೆ. ಪುರುಷರ ಏಕದಿನ ವಿಶ್ವಕಪ್ 2023 ಅಕ್ಟೋಬರ್-ನವೆಂಬರ್ ಅವಧಿಯಲ್ಲಿ, ಫೈನಲ್ ಪಂದ್ಯ ನ.26 ರಂದು ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

2021ರ ಟಿ20 ವಿಶ್ವಕಪ್ ಭಾರತದಲ್ಲಿ ಹಾಗೂ 2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಉಳಿದಂತೆ ನ್ಯೂಜಿಲೆಂಡ್‍ನಲ್ಲಿ ಮುಂದಿನ ವರ್ಷ ನಡೆಸಲು ಉದ್ದೇಶಿಸಿದ್ದ ಮಹಿಳಾ ವಿಶ್ವಕಪ್ ಟೂರ್ನಿಯ ಕುರಿತು ಐಸಿಸಿ ಚಿಂತನೆ ನಡೆಸಿದೆ.

ಕೊರೊನಾ ವೈರಸ್ ಕಾರಣದಿಂದ 2020ರ ಟಿ20 ವಿಶ್ವಕಪ್ ಮುಂದೂಡಿರುವುದನ್ನು ಐಸಿಸಿ ದೃಢಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸದ್ಯ ಐಸಿಸಿ ಬಹು ಸಮಯದಿಂದ ಟಿ20 ವಿಶ್ವಕಪ್ ಮುಂದೂಡುವ ನಿರ್ಧಾರವನ್ನು ತಡ ಮಾಡಿದ ಹಿನ್ನೆಲೆ ಬಿಸಿಸಿಐಗೂ ಐಪಿಎಲ್ ಆಯೋಜನೆಯ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಸದ್ಯ ಟಿ20 ವಿಶ್ವಕಪ್ ಮುಂದೂಡಿರುವುದರಿಂದ ಐಪಿಎಲ್ ಆಯೋಜನೆಯ ಹಾದಿ ಸುಗಮವಾಗಿದೆ.

Comments

Leave a Reply

Your email address will not be published. Required fields are marked *