ಕೊಡಗಿನ ಪ್ರಸಿದ್ಧ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಸಮಯ ಬದಲಾವಣೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಕೊರೊನಾ ರೋಗಿಗಳ ಸಂಖ್ಯೆ ಇದೀಗ 40ಕ್ಕೆ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಮುಜರಾಯಿ ಇಲಾಖೆ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಮತ್ತೆ ನಿರ್ಬಂಧ ಹೇರಲು ನಿರ್ಧರಿಸಿವೆ.

ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಬಾಗಮಂಡಲದ ಭಗಂಡೇಶ್ವರ ದೇವಾಲಯ, ತಲಕಾವೇರಿ ಸೇರಿದಂತೆ ಪ್ರಮುಖ ದೇವಾಲಯಗಳು ಸಮಯ ಬದಲಾವಣೆ ಮಾಡಿ ಭಕ್ತರ ಪ್ರವೇಶ ನಿರ್ಬಂಧಕ್ಕೆ ಮುಂದಾಗಿವೆ.

ಇದುವರೆಗೆ ಬೆಳಗ್ಗೆ 5 ರಿಂದ 12 ಗಂಟೆವರೆಗೆ ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಇತ್ತು. ಆದರೆ ಕೊಡಗಿನಲ್ಲಿ ಕೊರೊನಾ ಮಿತಿ ಮೀರುತ್ತಿರುವುದರಿಂದ ಆ ಸಮಯವನ್ನು ಬದಲಾಯಿಸಲಾಗಿದೆ. ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 6 ಗಂಟೆ ಬಳಿಕವಷ್ಟೇ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ಇದೆ.

ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರನ್ನು ನಿಯಂತ್ರಿಸುವುದಕ್ಕಾಗಿಯೇ ಈ ರೀತಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಎರಡುವರೆ ತಿಂಗಳ ಬಳಿಕ ದೇವಾಲಯಗಳನ್ನು ಸಾರ್ವಜನಿಕರ ದರ್ಶನಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೆ ಕೊಡಗಿನಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳ ಆಡಳಿತ ಮಂಡಳಿಗಳು ಇಂತಹ ನಿರ್ಧಾರ ಕೈಗೊಂಡಿವೆ.

Comments

Leave a Reply

Your email address will not be published. Required fields are marked *