ಕೊಡಗಿನ ಇಬ್ಬರು ಖೈದಿಗಳಿಗೆ ಕೊರೊನಾ – ಪೊಲೀಸ್ ಕಾವಲಿನೊಂದಿಗೆ ಚಿಕಿತ್ಸೆ

ಮಡಿಕೇರಿ: ಕೊಡಗು ಜಿಲ್ಲಾ ಕಾರಾಗೃಹದಲ್ಲಿನ ಇಬ್ಬರು ಸಜಾ ಬಂಧಿಗಳಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಸದ್ಯ ಕೋವಿಡ್ ಜಿಲ್ಲಾಸ್ಪತ್ರೆಯ ಜೈಲ್ ವಾರ್ಡ್‍ನಲ್ಲಿ ಪೊಲೀಸ್ ಕಾವಲಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪರಾಧ ಸಾಬೀತಾಗಿ ಜೈಲು ಶಿಕ್ಷೆಗೆಂದು ಕಾರಾಗೃಹಕ್ಕೆ ಬರುವ ಮೊದಲು ಕೊರೊನಾ ತಪಾಸಣೆ ನಡೆಸಿದಾಗ ಪಾಸಿಟಿವ್ ಇರುವುದು ಕಂಡು ಬಂದಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿಟಿವ್ ಬಂದ ಖೈದಿಗಳ ಸಂಪರ್ಕದಲ್ಲಿದ್ದ ಇನ್ನಿಬ್ಬರು ಬಿಡುಗಡೆ ಹೊಂದಿದ್ದು, ಜಿಲ್ಲಾ ಕಾರಾಗೃಹ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ನಡೆಸಿಕೊಂಡು ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದಾರೆ.

ಕಾರಾಗೃಹದಲ್ಲಿರುವ 136 ಖೈದಿಗಳಿಗೆ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸೀಮಿತ ದಿನಗಳಿಗೊಮ್ಮೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತಿದೆ. 45 ವರ್ಷ ಮೇಲ್ಪಟ್ಟ ಸಜಾ ಬಂಧಿಗಳಿಗೆ ಈಗಾಗಲೇ ಮೊದಲನೇ ಡೋಸ್ ಕೊರೊನ ವ್ಯಾಕ್ಸಿನ್ ನೀಡಲಾಗಿದೆ. ಅವಧಿ ಪೂರ್ಣಗೊಂಡ ನಂತರ ಎರಡನೇ ಡೋಸ್ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗುವುದು ಎಂದು ಕಾರಾಗೃಹದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಕಾಲಕಾಲಕ್ಕೆ ಆರೋಗ್ಯ ಇಲಾಖೆಯಿಂದ ವಿಟಮಿನ್ ಮಾತ್ರೆ ಹಾಗೂ ಇತರೆ ಔಷಧ ಉತ್ಪನ್ನಗಳನ್ನು ಪಡೆದು ವಿತರಿಸಲಾಗುತ್ತಿದೆ. ಕಾರಾಗೃಹದಲ್ಲಿರುವ ಖೈದಿಗಳಿಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಹಿಂದಿನ ಸಾಲಿನಲ್ಲಿ ಸರ್ಕಾರದಿಂದ ರೂ. 3ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸದರಿ ಮೊತ್ತದಲ್ಲಿ ಕೊರೊನಾ ಚಿಕಿತ್ಸೆಗೆ ಮುಂಜಾಗೃತಾ ಕ್ರಮಕ್ಕಾಗಿ ಬೇಕಾಗುವ ಮಾಸ್ಕ್, ಸ್ಯಾನಿಟೈಸರ್ ಹಾಗೂ ಇತರೆ ಅವಶ್ಯವಿರುವ ಸಾಮಾಗ್ರಿಗಳನ್ನು ಖರೀದಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಾಲಿನಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಕ್ಕಾಗಿ ಅವಶ್ಯವಿರುವ ಸಾಮಾಗ್ರಿಗಳನ್ನು ಖರೀದಿಸಲು ರೂ.6ಲಕ್ಷ ಮೊತ್ತಕ್ಕೆ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಾಧಿಕಾರಿಗಳಿಗೆ ಕಳುಹಿಸಿದ್ದು, ಈಗಾಗಲೇ ರೂ. 2ಲಕ್ಷ ಅನುದಾನ ಬಿಡುಗಡೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *