ಕೊಡಗಿನ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ

– 935 ಹೋಂ ಸ್ಟೇಗಳಿಗಾಗಿ ಅರ್ಜಿ

ಮಡಿಕೇರಿ: ಕೊರೊನಾ ಲಾಕ್‍ಡೌನ್ ಸಡಿಲಿಕೆಯ ನಂತರ ಹೋಂಸ್ಟೇಗಳ ಪುನರ್ ಆರಂಭಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ಹೋಂಸ್ಟೇಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ಎಚ್ಚರಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಈ ವರೆಗೆ 935 ಹೋಂಸ್ಟೇಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದು, 480 ಹೋಂಸ್ಟೇಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ 397 ಹೋಂಸ್ಟೇಗಳಿಗೆ ಇನ್ನೂ ಅನುಮೋದನೆ ದೊರೆತಿಲ್ಲ. ಉಳಿದ ಹೋಂಸ್ಟೇಗಳನ್ನು ತೆರೆದಲ್ಲಿ ಅವುಗಳ ಮೇಲೂ ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಹೋಂಸ್ಟೇ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ನೋಂದಾಯಿತ ಹೋಂಸ್ಟೇಗಳಲ್ಲದಿದ್ದರೆ, ಅವುಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ನೋಂದಣಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಹೋಂಸ್ಟೇಗಳ ನೋಂದಣಿ ಮಾಡಲು ತುಂಬಾ ವಿಳಂಬವಾಗುತ್ತಿದೆ. ಇದನ್ನು ಸರಿಮಾಡಲು, ಕಂದಾಯ ಇಲಾಖೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಕಂದಾಯ ಇಲಾಖೆ ಮತ್ತು ಪಿಡಿಓಗಳಿಗೆ ಹೋಂಸ್ಟೇಗಳ ನಿಯಮಗಳ ಬಗ್ಗೆ ತಿಳುವಳಿಕೆ ಇಲ್ಲ. ಹೀಗಾಗಿ ನೋಂದಣಿಯಲ್ಲಿ ಗೊಂದಲವಾಗುತ್ತಿದ್ದು, ಹೋಂಸ್ಟೇ ಮಾಲೀಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೋಂಸ್ಟೇ ಮಾಲೀಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Comments

Leave a Reply

Your email address will not be published. Required fields are marked *