ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ- ಹುತ್ತರಿ ಆಚರಣೆ

ಮಡಿಕೇರಿ: ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ ಮನೆ ಮಾಡಿದ್ದು, ಹೊಲಗದ್ದೆಗಳೆಲ್ಲ ಪೈರು, ತೆನೆಗಳಿಂದ ತೂಗುತ್ತಿವೆ. ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳು ಸಡಗರದ ಸುಗ್ಗಿ ಹಬ್ಬವಾಗಿರುವ ಹುತ್ತರಿಯನ್ನು ಸಂಭ್ರಮ ಮತ್ತು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ.

ಕೊಡಗು ವಿಶೇಷ ಸಂಸ್ಕೃತಿ ಆಚರಣೆಗಳಿಗೆ ಪ್ರಸಿದ್ಧ. ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯಂದು ಧಾನ್ಯ ದೇವತೆಯನ್ನು ಮನೆ ತುಂಬಿಸಿಕೊಳ್ಳಲಾಗುತ್ತದೆ. ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಒಕ್ಕಣೆ ಮಾಡಿ ಮನೆಗೆ ತರುವುದಕ್ಕೂ ಮುನ್ನ ಸಂಪ್ರದಾಯ ಬದ್ಧವಾಗಿ ಧಾನ್ಯ ಲಕ್ಷ್ಮಿಗೆ ಪೂಜೆ ಸಲ್ಲಿಸಿದರು. ಈ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡು ಹುತ್ತರಿ ಆಚರಿಸಲಾಯಿತು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಕಬೆಟಗೇರಿಯ ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ಸುಗ್ಗಿ ಆಚರಿಸಲಾಯಿತು. ಐದು ಬಗೆಯ ಪತ್ರೆಗಳನ್ನಿಟ್ಟು ಕೊಡಗಿನ ಕುಲದೇವರಾದ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನೆರೆ ಕಟ್ಟಿದರು. ಬಳಿಕ ಬೆಳೆಯಿಂದ ತುಂಬಿದ್ದ ಹೊಲಗದ್ದೆಗಳಿಗೆ ಮಂಗಳವಾದ್ಯಗಳಾದ ದುಡಿಕೊಟ್ಟುಪಾಟ್ ಮೂಲಕ ತೆರೆಳಿ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸಿದರು.

ವೀರತ್ವದ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಧಾನ್ಯಲಕ್ಷ್ಮಿಗೆ ಗೌರವ ಸಲ್ಲಿಸಿದರು. ಬಳಿಕ ಕದಿರು ಕೊಯ್ದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಒಕ್ಕಣೆ ಕಣಕ್ಕೆ ಕದಿರು ತರಲಾಯಿತು. ಹೀಗೆ ತಂದ ಕದಿರನ್ನು ಕಣದಲ್ಲಿಟ್ಟು ಪೂಜೆ ಸಲ್ಲಿಸಿ ಕೊಡವರ ಸಾಂಪ್ರದಾಯಿಕ ನೃತ್ಯಗಳಾದ ದುಡಿಕೊಟ್ಟು ಪಾಟ್, ಕೋಲಾಟ್ ಮತ್ತು ಪರಿಯಕಳಿ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು.

ನಂತರ ಕದಿರನ್ನು ಮನೆಗೆ ಕೊಂಡೊಯ್ದು ಸ್ವಾಮಿ ಇಗ್ಗುತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಕೊಂಡರು. ಕೊಡವರಿಗೆ ಅಷ್ಟೇ ಅಲ್ಲದೆ ಕೊಡಗಿನ ಎಲ್ಲ ಸಮುದಾಯಗಳು ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲು ಇರುವ ವಿಶೇಷ ಹಬ್ಬ ಹುತ್ತರಿ. ಕೊಡವರು ಮತ್ತು ಅರೆಗೌಡ ಸಮುದಾಯಗಳಿಗೆ ತುಂಬಾ ವಿಶೇಷ. ಈ ಹಬ್ಬದ ಮೂಲಕ ಇಲ್ಲಿನ ಸಾಂಸ್ಕøತಿಕ ಪರಂಪರೆಯನ್ನು ದೇಶಕ್ಕೆ ತೋರಿಸುವುದೂ ಹೌದು. ಜೊತೆಗೆ ಈ ವಿಶೇಷ ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವುದು ಅಗತ್ಯವಾಗಿರುವ ಹಿನ್ನೆಲ್ಲೆಯಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ.

Comments

Leave a Reply

Your email address will not be published. Required fields are marked *