ಕೊಡಗಿನಲ್ಲಿ ಸೆಪ್ಟೆಂಬರ್ ಕೊನೆಯವರೆಗೂ ಖಾಸಗಿ ಬಸ್ ಸಂಚಾರ ಇಲ್ಲ

ಮಡಿಕೇರಿ: ಕೊರೊನಾ ಮಹಾಮಾರಿಯಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದ ಸರ್ಕಾರ ಬಳಿಕ ಹಂತ ಹಂತವಾಗಿ ಸಡಿಲ ಮಾಡಿತು. ಲಾಕ್‍ಡೌನ್ ಸಡಿಲಿಕೆ ಮಾಡಿ ಸಾರಿಗೆ ಸಂಚಾರ ಆರಂಭವಾಗಿದ್ದರೂ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಮಾತ್ರ ಲಾಕ್‍ಡೌನ್ ನಲ್ಲೇ ಇದ್ದಾರೆ.

ಖಾಸಗಿ ಬಸ್ಸುಗಳ ಸಂಚಾರವನ್ನೇ ನಂಬಿಕೊಂಡಿರುವ ಕೊಡಗಿಗೆ ಅವುಗಳ ಓಡಾಟವಿಲ್ಲದೆ ಜನರು ಪರಿಪಾಟಲು ಪಡುವಂತಾಗಿದೆ. 150ಕ್ಕೂ ಹೆಚ್ಚು ಖಾಸಗಿ ಬಸ್ಸುಗಳಿರುವ ಕೊಡಗಿನಲ್ಲಿ ಗ್ರಾಮೀಣ ಭಾಗಕ್ಕೆ ಅವುಗಳೇ ಸಂಪರ್ಕ ಸೇತುವೆ. ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ ಬಸ್ಸುಗಳಲ್ಲಿ ಸಾರಿಗೆ ಸಂಚಾರ ಮಾಡುವುದಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು ಅಂತಾ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಾಗಿ ಬಸ್ಸುಗಳಲ್ಲಿ ಅರ್ಧದಷ್ಟು ಸೀಟುಗಳಿಗಿಂತ ಹೆಚ್ಚು ಜನರನ್ನು ಕರೆದೊಯ್ಯುವಂತಿಲ್ಲ.

ಈ ನಿಯಮದಂತೆ ಬಸ್ ಓಡಿಸುವುದಾದರೆ ತಮಗೆ ನಷ್ಟ ಆಗುತ್ತೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಕೊನೆಯವರೆಗೂ ಬಸ್ಸುಗಳನ್ನು ಓಡಿಸುವುದಿಲ್ಲ ಅಂತಾ ಖಾಸಗಿ ಬಸ್ ಮಾಲಿಕರ ಸಂಘ ನಿರ್ಧರಿಸಿದೆ.

ಖಾಸಗಿ ಬಸ್ಸಿನಲ್ಲಿ ಇರೋದೆ 45 ಸೀಟುಗಳು ಅದರಲ್ಲಿ ಅರ್ಧ ಪ್ರಮಾಣ ಮಾತ್ರ ಸೀಟು ಹಾಕಿದರೆ ನಮಗೆ ಭಾರಿ ನಷ್ಟವಾಗುತ್ತದೆ. ಆದ್ದರಿಂದ ನಾವು ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಸ್ಸು ಓಡಿಸುವುದಾದರೆ ಸರ್ಕಾರ 6 ತಿಂಗಳ ಟ್ಯಾಕ್ಸ್ ರಿಯಾಯ್ತಿ ನೀಡಲಿ. ಇಲ್ಲದಿದ್ದರೆ ಸೆಪ್ಟೆಂಬರ್ ತಿಂಗಳ ಬಳಿಕವಷ್ಟೇ ಬಸ್ಸುಗಳ ಓಡಿಸಲು ನಿರ್ಧರಿಸಲಾಗುವುದು ಅನ್ನೋದು ಖಾಸಗೀ ಬಸ್ ಮಾಲೀಕರ ಸಂಘದ ನಿರ್ಧಾರ.

ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಬಸ್ಸುಗಳೆ ಓಡಾಡುತ್ತಿದ್ದವು. ಆದರೆ ಇದೀಗ ಅವುಗಳು ಇಲ್ಲದಿದ್ದರೆ ಜಿಲ್ಲಾಡಳಿತ ಸರ್ಕಾರಿ ಸಾರಿಗೆಯನ್ನಾದರೂ ಓಡಿಸಲಿ. ಇಲ್ಲವೆ ಖಾಸಗಿ ಬಸ್ಸುಗಳ ಮಾಲೀಕರ ಸಂಘದವರನ್ನು ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಬಸ್ ಓಡಿಸಲು ಸೂಚಿಸಲಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *