ಕೊಡಗಿನಲ್ಲಿ ಮೊಕ್ಕಾಂ ಹೂಡಿದ ಎನ್‍ಡಿಆರ್‍ಎಫ್ ತಂಡ

ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ ಮಳೆಗಾಲ ಆರಂಭಕ್ಕೂ ಮುನ್ನವೇ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ. ಆಂಧ್ರಪ್ರದೇಶದ ಗುಂಟೂರಿನಿಂದ 10 ನೇ ಬೆಟಾಲಿಯನ್ ನ 23 ಜನರಿರುವ ಒಂದು ತಂಡ ಕೊಡಗಿಗೆ ಆಗಮಿಸಿದೆ. ಮಡಿಕೇರಿಯ ಮೈತ್ರಿ ಹಾಲ್ ನಲ್ಲಿ ಈ ತಂಡ ಮೊಕ್ಕಾಂ ಹೂಡಿದೆ.

ಕಳೆದ ಎರಡು ವರ್ಷಗಳಲ್ಲೂ ಕೊಡಗಿನಲ್ಲಿ ಭಾರೀ ಭೂಕಂಪ ಮತ್ತು ಪ್ರವಾಹ ಎದುರಾಗಿತ್ತು. ಈ ವೇಳೆ ಎನ್‌ಡಿಆರ್‌ಎಫ್ ತಂಡ, ಅಗ್ನಿ ಶಾಮಕ ದಳ, ಜಿಲ್ಲಾ ಶಸಸ್ತ್ರ ಪಡೆ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿ ಜನರನ್ನು ರಕ್ಷಿಸುವ ಕೆಲಸ ಮಾಡಿದ್ದರು. ಈ ಬಾರಿಯೂ ಮಳೆ ಹೆಚ್ಚು ಸುರಿಯುವ ಸಾಧ್ಯತೆ ಇರುವುದಿರಂದ ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಬೇಕಾಗಿರುವ ಬೋಟ್, ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿದೆ.

ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮಾನ್ಸೂನ್ ಎಂಟ್ರಿ ಕೊಡಲಿದ್ದು ಜಿಲ್ಲಾಡಳಿತ ಹೈಅಲರ್ಟ್ ಆಗಿದೆ. ಅಲ್ಲದೆ ಕೊಡಗು ಜಿಲ್ಲೆಯಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣ ತುಂತುರು ಮಳೆಯಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿಯೂ ತುಂತುರು ಮಳೆಗೆ ಜನತೆ ಕಿರಿಕಿರಿ ಅನುಭವಿಸುವಂತೆ ಆಗಿದೆ.

ಈಗಾಗಲೇ ವಿರಾಜಪೇಟೆ, ಭಾಗಮಂಡಲ, ತಲಕಾವೇರಿ, ಬ್ರಹ್ಮಗಿರಿ ಹಾಗೂ ನಾಪೋಕ್ಲು ಸೇರಿದಂತೆ ವಿವಿಧೆಡೆ ತುಂತುರು ಮಳೆ ಆಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದಿರುವುದರಿಂದ ಉತ್ತಮ ಮಳೆ ಆಗುತ್ತಿದೆ. ಅಲ್ಲದೆ ಜೂನ್ 5 ರಂದು ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಚದುರಿದಂತೆ ಹಾಗೂ ಗಾಳಿ ಸಹಿತ 115.60 ಮಿ.ಮೀ ನಿಂದ 204.4 ಮಿ.ಮೀಟರ್ ನಷ್ಟು ವ್ಯಾಪಕ ಭಾರೀ ಮಳೆ ಆಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.

Comments

Leave a Reply

Your email address will not be published. Required fields are marked *