ಕೊಡಗಿನಲ್ಲಿ ಮೃತ ವ್ಯಕ್ತಿಯಿಂದ 8 ಜನರಿಗೆ ಕೊರೊನಾ

ಮಡಿಕೇರಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಮೃತ ವ್ಯಕ್ತಿಯಿಂದ 8 ಜನರಿಗೆ ಡೆಡ್ಲಿ ವೈರಸ್ ವಕ್ಕರಿಸಿದೆ.

ಬೆಂಗಳೂರಿನಿಂದ ಕೊಡಗು ಜಿಲ್ಲೆ ಕುಶಾಲನಗರದ ದಂಡಿನಪೇಟೆಗೆ ಬಂದಿದ್ದ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಅರ್ಧ ಗಂಟೆಯಲ್ಲೇ ಮೃತಪಟ್ಟಿದ್ದರು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಮೃತ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಅಷ್ಟೊತ್ತಿಗಾಗಲೇ ವ್ಯಕ್ತಿಯ ಸಂಪರ್ಕ ಹೊಂದಿದ್ದ ಹಲವರ ಪೈಕಿ 8 ಜನರಿಗೆ ಕೊರೊನಾ ಮಹಾಮಾರಿ ಹೆಗಲೇರಿದೆ.

17 ವರ್ಷದ ಯುವಕನಿಂದ ಹಿಡಿದು 65 ವರ್ಷದ ವೃದ್ಧರವೆಗೂ 8 ಜನರಿಗೆ ಕೊರೊನಾ ವಕ್ಕರಿಸಿದೆ. ಅಷ್ಟೇ ಅಲ್ಲದೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಆರೋಗ್ಯ ಇಲಾಖೆಯ ವಾಹನ ಚಾಲಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೂ ಸೋಂಕು ತಗುಲಿದೆ. ಅಲ್ಲದೆ ಜ್ವರದಿಂದ ಬಳಲುತ್ತಿದ್ದ ಮಕ್ಕಳು ವೃದ್ಧರಿಗೂ ಕೊರೊನಾ ಅಂಟಿದೆ.

ಬೆಳಗ್ಗೆಯಷ್ಟೇ 5 ಜನರಿಗೆ ಕಾಡಿದ್ದ ಕೊರೊನಾ ಸಂಜೆ ವೇಳೆಗೆ ಮತ್ತೆ 13 ಜನರಿಗೆ ವಕ್ಕರಿಸಿದೆ. ಹೀಗಾಗಿ ಒಂದೇ ದಿನ ಕೊಡಗು ಜಿಲ್ಲೆಯಲ್ಲಿ 18 ಜನರಿಗೆ ಸೋಂಕು ದೃಢವಾಗಿದ್ದು, ಇದುವರೆಗೆ 169 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಡೆಡ್ಲಿ ವೈರಸ್‍ಗೆ ಬಲಿಯಾಗಿದ್ದರೆ, 105 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 62 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *