ಕೊಡಗಿನಲ್ಲಿ ಇಂದು ಕೋವಿ ಉತ್ಸವದ ಸಂಭ್ರಮ

ಮಡಿಕೇರಿ: ಕೊಡಗಿನ ಕೊಡವರ ಪ್ರತಿಯೊಂದು ಅಚರಣೆಗಳು ಭಿನ್ನ, ವಿಶಿಷ್ಟ. ಇಂತಹ ಅಚರಣೆಗಳ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ಕೋವಿ ಉತ್ಸವ ಭರ್ಜರಿಯಾಗಿ ನಡೆಯಿತು.

ಕೊಡಗಿನ ಜನರ ವಿಶಿಷ್ಟ ಸಂಸ್ಕ್ರತಿಯ ಭಾಗ ಕೋವಿ. ಯೋಧ ಪರಂಪರೆಯ ಜನಾಂಗ ಕೊಡವರಿಗೆ ಕೋವಿ ಬಳಸಲು ವಿಶೇಷ ವಿನಾಯಿತಿಯ ಅನುಮತಿಯಿದೆ. ಇಂಡಿಯನ್ ಆರ್ಮ್ಸ್ ಆಕ್ಟ್ ಸೆಕ್ಷನ್ ಮೂರರ ಪ್ರಾಕಾರ ಯಾರಿಗೂ ಇಲ್ಲದ ಅನುಮತಿ ಕೊಡವರಿಗೆ ಇದೆ. ಕೊಡಗಿನ ಜನರ ಹಬ್ಬ ಹರಿದಿನ. ಹುಟ್ಟು, ಸಾವು ಎಲ್ಲದರಲ್ಲಿಯೂ ಕೋವಿಯ ಮಹತ್ವವಿದೆ. ಬಂದೂಕು ಕೊಡವರಿಗೆ ಕೇವಲ ಒಂದು ಅಯುಧವಲ್ಲ, ಇದು ಇಲ್ಲಿನ ಜನರ ಧಾರ್ಮಿಕ ಸಂಕೇತ ಕೊಡವರಲ್ಲಿ ಕೋವಿಗೆ ಪೂಜ್ಯಭಾವನೆಯಿದೆ, ಪವಿತ್ರ ಸ್ಥಾನವಿದೆ.

ಪ್ರತಿ ಮನೆಯಲ್ಲಿಯೂ ಹಬ್ಬ ಹರಿದಿನಗಳಂದು ದೇವರಂತೆಯೇ ಕೋವಿಗೂ ಪೂಜೆ ಸಲ್ಲುತ್ತದೆ. ಇದೆಲ್ಲದರ ಸಂಕೇತವಾಗಿ ಕೋವಿ ಉತ್ಸವ ಶುರುವಾಗಿದೆ. ಕಳೆದ 10 ವರ್ಷದಿಂದ ಈ ಕೋವಿ ಉತ್ಸವಕ್ಕೆ ಕೊಡಗಿನಲ್ಲಿ ಚಾಲನೆ ಸಿಕ್ಕಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಗೇರಿಯಲ್ಲಿ ಇಂದು ನಡೆದ ಈ ವಿಶಿಷ್ಟ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲರೂ ಗುಂಡು ಸಿಡಿಸಿ ಸಂಭ್ರಮಿಸಿದರು.

ಸಾಂಪ್ರದಾಯಿಕ ಉಡುಗೆತೊಟ್ಟ ನೂರಾರು ಕೊಡವರು ಮೈದಾನದಲ್ಲಿ ಜಮಾಯಿಸಿ, ಎಲ್ಲ ಬಂದೂಕುಗಳನ್ನು ಒಂದೆಡೆ ಇಟ್ಟು, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯೋ ಆಟವಾಡಿ, ಬಂದೂಕು ತಮ್ಮ ಹಕ್ಕು ಎಂಬುದನ್ನು ಸಾರುತ್ತಾರೆ. ಮಹಿಳೆಯರು, ಪುರುಷರು ಎಲ್ಲರೂ ಗುರಿಯಿಟ್ಟು ತೆಂಗಿನ ಕಾಯಿಗೆ ಹೊಡೆಯುತ್ತಾ ಕೇಕೆ ಹಾಕಿ ಕುಣಿದು ಕುಪ್ಪಳಿಸಿ ಕೋವಿ ಉತ್ಸವವನ್ನು ಎಂಜಾಯ್ ಮಾಡುತ್ತಾರೆ.

ಡಿಸೆಂಬರ್ 18 ವಿಶ್ವ ಅಲ್ಪ ಸಂಖ್ಯಾತರ ದಿನಾಚರಣೆ ಹಾಗಾಗಿ ಕಳೆದ 10 ವರ್ಷದಿಂದ ಈ ದಿನದಂದು ಸಿ.ಎನ್.ಸಿ ಕೋವಿ ಉತ್ಸವ ಆಚರಿಸುತ್ತಾ ತಮ್ಮ ಸಂಸ್ಕ್ರತಿಯ ಭಾಗವೇ ಅದ ಕೋವಿಯನ್ನು ಸಾರ್ವಜನಿಕವಾಗಿ ಬಳಸುತ್ತ ಕೋವಿ ತಮ್ಮ ಹಕ್ಕು ಎಂಬುದನ್ನು ಸಾರುತ್ತಿದೆ. ಇದನ್ನು ನಾವು ಬಳಸೋದು ಪ್ರಾಣ ರಕ್ಷಣೆಗಾಗಿ ಅಲ್ಲ. ಬದಲಾಗಿ ಕೋವಿಗೆ ಕೊಡವರಲ್ಲಿ ಪೂಜ್ಯಭಾವನೆಯು ಇದೆ ಎನ್ನುತ್ತಾರೆ ಕೊಡವರು.

Comments

Leave a Reply

Your email address will not be published. Required fields are marked *