ಕೈಗೊಂಬೆಯಾಗಿ ಕೆಲಸ, 10 ವೀಡಿಯೋ ಬರಲಿ ಹೆದರಲ್ಲ: ರಮೇಶ್ ಜಾರಕಿಹೊಳಿ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಎರಡನೇ ವೀಡಿಯೋ ಹೇಳಿಕೆ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಯುವತಿ ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಇಂತಹ 10 ವೀಡಿಯೋ ಬರಲಿ ನಾನು ಹೆದರಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ರಾಜಕೀಯವಾಗಿ ಎದುರಿಸಲು ಸಿದ್ಧನಿದ್ದೇನೆ. ನಾನು ದೂರು ನೀಡಿದ ಅರ್ಧ ಗಂಟೆ ನಂತ್ರ ವೀಡಿಯೋ ಬಂದಿರೋದು ಎಲ್ಲರಿಗೂ ಗೊತ್ತು. ಈ ರೀತಿಯ 10 ವೀಡಿಯೋಗಳು ಬಂದ್ರೂ ಎದುರಿಸುವ ಶಕ್ತಿ ನನ್ನಲಿದೆ ಎಂದರು.

ಒತ್ತಡದಲ್ಲಿ ಯುವತಿ: ಯುವತಿ ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂಬುದರ ಬಗ್ಗೆ ನಾವು ಖಾಸಗಿಯಾಗಿ ತನಿಖೆ ಮಾಡುತ್ತಿದ್ದು, ನಮ್ಮ ವಕೀಲರು ಮಾಹಿತಿ ಜೊತೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನ ಸಂಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಹೇಳಿಕೆ ನೀಡಬಾರದು ಎಂದು ವಕೀಲರು ಸೂಚನೆ ನೀಡಿದ್ದಾರೆ. ಆದ್ರೆ ಇಂದು ಸ್ಪಷ್ಟನೆ ನೀಡೋದು ಅನಿವಾರ್ಯ. ಆ ಯುವತಿ ಎಷ್ಟು ಒತ್ತಡದಲ್ಲಿದ್ದಾಳೆ ಅನ್ನೋದು ವೀಡಿಯೋದಲ್ಲಿ ಕಾಣುತ್ತಿದೆ.

ನಿರ್ದೋಷಿ ಆಗಿ ಬರುತ್ತೇನೆ: ನಾನು ಮಾತ್ರ ಯಾವುದೇ ತಪ್ಪು ಮಾಡಿಲ್ಲ. ಅವರನ್ನ ಜೈಲಿಗೆ ಕಳುಹಿಸದೇ ಬಿಡಲ್ಲ. ವೀಡಿಯೋದಲ್ಲಿ ಹೇಳುವ ಯುವತಿ ಪೊಲೀಸರ ಮುಂದೆ ಬಂದು ಹೇಳಲಿ. ಕಾಂಗ್ರೆಸ್ ನಾಯಕರ ಸಹಕಾರ ಕೇಳ್ತಾರೆ ಅಂದ್ರೆ ಇದರಲ್ಲಿರುವ ಷಡ್ಯಂತ್ರ ಅರ್ಥವಾಗಬೇಕಿದೆ. ನಾವು ಸಹ ಹಲವು ದಾಖಲೆ ಸಂಗ್ರಹಿಸಿದ್ದು, ಸದ್ಯ ನನ್ನ ಜೇಬಿನಲ್ಲಿರೋ ದಾಖಲೆ ತೋರಿಸಿದ್ರೆ ಎಲ್ಲರೂ ಶಾಕ್ ಆಗ್ತಾರೆ. ಮಹಾ ನಾಯಕನ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಆದ್ರೆ ನಾನು ಕಾನೂನು ಹೋರಾಟ ನಡೆಸಿ ನಿರ್ದೋಷಿ ಆಗಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧ್ವನಿ ಬದಲಾವಣೆ ಗಮನಿಸಿ: ಸಿಡಿ ಯುವತಿ ಮೊದಲ ಮತ್ತು ಎರಡನೇ ವೀಡಿಯೋದಲ್ಲಿ ಧ್ವನಿ ಹೇಗಿತ್ತು ಅನ್ನೋದನ್ನ ಗಮನಿಸಿ. ಸಮಯ ಬಂದಾಗ ನಾನು ನನ್ನ ಬಳಿ ಇರೋ ದಾಖಲಾತಿ ಬಿಡುಗಡೆ ಮಾಡ್ತೀನಿ. ಮೊನ್ನೆವರೆಗೂ ವಿಪಕ್ಷಗಳು ಹಾಗೂ ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರಗೌರವ ಇತ್ತು. ರೇಪ್ ಕೇಸ್ ಹಾಕಿ ಅಂತ ಹೇಳಿದಾಗ ನನಗೂ ಒಂದು ಕ್ಷಣ ಶಾಕ್ ಆಯ್ತು. ಯಾಕೆ ಅವರು ಹಾಗೆ ಹೇಳಿದ್ರೂ ಅನ್ನೋದು ಗೊತ್ತಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಸದನದಲ್ಲಿ ಕಾಂಗ್ರೆಸ್ ಧರಣಿಗೆ ಅಸಮಾಧಾನ ಹೊರ ಹಾಕಿದರು.

ಯುವತಿ ಹೇಳಿದ್ದೇನು?: ನಮ್ಮ ಅಪ್ಪ, ಅಮ್ಮ ಸ್ವಇಚ್ಛೆಯಿಂದ ದೂರು ನೀಡಿಲ್ಲ ಅನ್ನೋದು ನನಗೆ ನೂರಕ್ಕೆ ನೂರರಷ್ಟು ಗೊತ್ತು. ಮಗಳು ತಪ್ಪು ಮಾಡಿಲ್ಲ ಅನ್ನೋದು ಪೋಷಕರಿಗೆ ಗೊತ್ತಿದೆ. ನನಗೆ ಅಪ್ಪ, ಅಮ್ಮನ ಸುರಕ್ಷತೆ ಮುಖ್ಯ. ಅವರು ಸೇಫ್ ಆಗಿದ್ದರೆ ಅನ್ನೋದು ಖಾತ್ರಿಯಾದಾಗ ಎಸ್‍ಐಟಿ ಮುಂದೆ ಬಂದು ಹೇಳಿಕೆ ದಾಖಲಿಸುತ್ತೇನೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ-ತಾಯಿಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನನಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ನಾನು ಮಾರ್ಚ್ 12 ರಂದು ವೀಡಿಯೋ ಹೇಳಿಕೆಯನ್ನ ಎಸ್‍ಐಟಿಗೆ ನೀಡಿದ್ದೆ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸಿದ ಅರ್ಧ ಗಂಟೆಯಲ್ಲಿ ನನ್ನ ವೀಡಿಯೋ ಹೊರಗೆ ಬಿಡುತ್ತಾರೆ. ಎಸ್‍ಐಟಿ ಯಾರ ಪರ ಕೆಲಸ ಮಾಡುತ್ತಿದ್ದಾರೆ ಅನ್ನೋದು ಅರ್ಥ ಆಗ್ತಿಲ್ಲ. ಅಧಿಕಾರಿಗಳು ಯಾರನ್ನ ಸೇಫ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *