ಕೇಸ್ ಮುಗಿದ್ಮೇಲೆ ಹೈಕಮಾಂಡ್ ರಮೇಶ್ ಜಾರಕಿಹೊಳಿಯನ್ನ ಮಂತ್ರಿ ಮಾಡುತ್ತೆ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಪ್ರಕರಣ ಇತ್ಯರ್ಥವಾದ ಬಳಿಕ ರಮೇಶ್ ಜಾರಕಿಹೊಳಿ ಅವರನ್ನ ಸಚಿವರನ್ನಾಗಿ ಮಾಡಲಾಗುವುದು ಎಂದು ಸೋದರ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮನೆಯಲ್ಲಿ ಭಿನ್ನಮತಿಯ ಸಭೆ ಅಂತ ಮಾಧ್ಯಮಗಳಲ್ಲಿ ಬರ್ತಿದೆ. ಆದ್ರೆ ಯಾವುದೇ ಭಿನ್ನಮತ ನಮ್ಮಲ್ಲಿ ಇಲ್ಲ. ಸಿಎಂ ಭೇಟಿಗೆ ಸಮಯ ಕೇಳಿದ್ದೀವಿ, ಇವತ್ತು ಸಮಯ ನೀಡಿದ್ದರಿಂದ ಬಂದಿದ್ದೇವೆ. ರಮೇಶ್ ಜಾರಕಿಹೊಳಿ ಅವರನ್ನ ಸಚಿವರನ್ನಾಗಿ ಮಾಡಬೇಕು ಅನ್ನೋದು ನಮ್ಮ ಬೇಡಿಕೆ. ನನಗೆ ಸಚಿವ ಸ್ಥಾನದ ಮೇಲೆ ಯಾವುದೇ ಆಕಾಂಕ್ಷೆ ಇಲ್ಲ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ನಿನ್ನೆ ರಾತ್ರಿ ಅಸಮಾಧಾನಿತ ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿದ್ರು. ರಮೇಶ್ ಜಾರಕಿಹೊಳಿ ಮನೆಯಲ್ಲಿ ಭಿನ್ನಮತಿಯರು ರಹಸ್ಯ ಸಭೆ ನಡೆಸಿದ್ರು ಎಂಬ ವಿಷಯಕ್ಕೆ ಸ್ಪಷ್ಟನೆ ನೀಡಲು ಸಿಎಂರನ್ನ ಭೇಟಿ ಮಾಡಿದ್ದರು ಎನ್ನಲಾಗಿದೆ.

17 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬ ಸದಸ್ಯರು ಇಲ್ಲದ ಸಂಪುಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ, ತಮ್ಮ ಬೆಂಬಲಿಗ ಶಾಸಕರೊಂದಿಗೆ ಕಳೆದ ರಾತ್ರಿ ಸಭೆ ನಡೆಸಿದ್ದಾರೆ.

ತಾವು ಬಿಜೆಪಿಗೆ ಕರೆತಂದ ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ಕೈತಪ್ಪಿರುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಸಚಿವ ಸ್ಥಾನ ಸಿಗದೇ ಇರೋದಕ್ಕೆ ನೊಂದಿರುವ ಶ್ರೀಮಂತ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಶೀಘ್ರವೇ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕ್ಷತ್ರಿಯ ಮರಾಠ ಒಕ್ಕೂಟ ಎಚ್ಚರಿಸಿದೆ. ಇದನ್ನೂ ಓದಿ: ಪವರ್ ಫುಲ್ ಖಾತೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ರೆಬಲ್‍ಗಳ ರಹಸ್ಯ ಸಭೆ!

Comments

Leave a Reply

Your email address will not be published. Required fields are marked *