ಕೇವಲ 23 ನಿಮಿಷದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮುಕ್ತಾಯ

– 500 ಮೀ. ಮಾತ್ರ ಸಾಗಿದ ಜಂಬೂ ಸವಾರಿ

ಮೈಸೂರು: ಕೊರೊನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಗಿದ್ದು, ಕೇವಲ 23 ನಿಮಿಷಗಳಲ್ಲಿ ಜಂಬೂ ಸವಾರಿ ಮುಕ್ತಾಯಗೊಂಡಿದೆ.

ಪ್ರತಿ ವರ್ಷ ವಿಜೃಂಭಣೆಯಿಂದ ಗಂಟೆಗಟ್ಟಲೇ ನಡೆಯುತ್ತಿದ್ದ ಮೈಸೂರು ದಸರಾದ ಜಂಬೂ ಸವಾರಿ ಈ ಬಾರಿ ಕೇವಲ 23 ನಿಮಿಷಕ್ಕೆ ಮುಕ್ತಾಯವಾಯಿತು. ಮಧ್ಯಾಹ್ನ 3.21ಕ್ಕೆ ಕುಂಬ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಅರಮನೆ ಆವರಣದಲ್ಲೇ ಜಂಬೂ ಸವಾರಿ ನೆರವೇರಿಸಲಾಗಿದ್ದು, ಕೇವಲ 500 ಮೀಟರ್ ಮಾತ್ರ ನಡೆಸಲಾಗಿದೆ.

750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಮೆರವಣಿಗೆ ಮಾಡಲಾಯಿತು. ಕೇವಲ 500 ಮೀಟರ್ ಸಾಗಿದ ಜಂಬೂ ಸವಾರಿ, ಬಲರಾಮ ದ್ವಾರದ ಬಳಿ ಮುಕ್ತಾಯಗೊಂಡಿತು.

ಪ್ರತಿ ವರ್ಷ ಸಂಭ್ರಮದಿಂದ ದಸರಾ ಆಚರಿಸಲಾಗುತ್ತಿತ್ತು. ವಿವಿಧ ಜಿಲ್ಲೆ, ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳ ಕಲಾವಿದರು ಆಗಮಿಸಿ ವಿವಿಧ ಕಲೆ ಪ್ರದರ್ಶಿಸುತ್ತಿದ್ದರು. ಆದರೆ ಈ ಬಾರಿ ಕೇವಲ ಕೊರೊನಾ ಜಾಗೃತಿ, ಅರಮನೆ ವಾದ್ಯಗೋಷ್ಠಿ, 2 ಟ್ಯಾಬ್ಲೋ, ಚಂಡೆಮೇಳ, ವೀರಗಾಸೆ, ಮರಗೋಲು ಸೇರಿದಂತೆ ಇತರ ಕೆಲವು ಕಲಾ ಮೇಳಗಳಷ್ಟೇ ಭಾಗವಹಿಸಿದ್ದವು.

ಜಂಬೂ ಸವಾರಿ ಹೆಚ್ಚು ಹೊತ್ತು ನಡೆಯದ ಕಾರಣ ಅರಮನೆ ಸುತ್ತಲಿನ ಸಂಚಾರ ಸಹಜ ಸ್ಥಿತಿಯತ್ತ ಮರಳಿದೆ. ಜಂಬೂ ಸವಾರಿ ಕಾರಣದಿಂದಾಗಿ ಬ್ಯಾರಿಕೇಡ್ ಹಾಕಿ ಸಂಚಾರವನ್ನು ಪೊಲೀಸರು ಸಂಚಾರ ನಿರ್ಬಂಧಿಸಿದ್ದರು. ಇದೀಗ ಎಲ್ಲ ಕಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Comments

Leave a Reply

Your email address will not be published. Required fields are marked *