ಕೇವಲ 2 ಸಂಸದರು, 2 ಕೊಠಡಿಯಿಂದ ಇಂದು ಭಾರತದ ಮೂಲೆ ಮೂಲೆಯಲ್ಲಿ ಕಮಲ ಅರಳಿದೆ- ಮೋದಿ

– ಅಭಿವೃದ್ಧಿ ಕೆಲಸ ಮಾಡಿದ್ರೆ ಜನ ವೋಟ್‌ ಹಾಕ್ತಾರೆ
– ಸೈಲೆಂಟ್‌ ವೋಟರ್ಸ್‌ ಬಗ್ಗೆ ಮೋದಿ ಪ್ರಸ್ತಾಪ

ನವದೆಹಲಿ: ಎರಡು ಸಂಸದರು, ಎರಡು ಕೊಠಡಿಯಿಂದ ಬಿಜೆಪಿ ಈಗ ದೇಶವ್ಯಾಪಿ ಹರಡಿದೆ. ಈ ಸಾಧನೆಗೆ ಕಾರಣವಾದ ಎಲ್ಲ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಗೆಲುವು. 10 ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿ ಬಳಿ ಕೇಸರಿ ಪಡೆ ವಿಜಯ್ ದಿವಸ್ ಆಚರಿಸಿ ಸಂಭ್ರಮಿಸಿತು.

ಈ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಷಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಪಾಲ್ಗೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಸಂಖ್ಯ ಕಾರ್ಯಕರ್ತರನ್ನು ಉದ್ದೇಶಿಸಿ ವಿಜಯೋತ್ಸವ ಭಾಷಣ ಮಾಡಿದ ಮೋದಿ, ಭಾರತದ ಜನರೊಂದಿಗೆ ರಾಷ್ಟ್ರೀಯ ಸಂಪರ್ಕವನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಕೇವಲ 2 ಸಂಸದರು ಮತ್ತು 2 ಕೊಠಡಿಗಳಿಂದ ಇಂದು ಭಾರತದ ಮೂಲೆ ಮೂಲೆಯಲ್ಲಿ ಬಿಜೆಪಿ ಇದೆ ಎಂದು ಹೇಳಿದರು.

ದೇಶದ ಹಲವೆಡೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಜನ ಅಭಿವೃದ್ಧಿ, ಸುಶಾಸನ್ ಪರ ಇದ್ದಾರೆ. ಹೀಗಾಗಿಯೇ ಬಿಹಾರ, ಮಣಿಪುರದಿಂದ ಹಿಡಿದು ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣದಲ್ಲಿ ಬಿಜೆಪಿ ಗೆದ್ದಿದೆ ಎಂದರು.

ದೇಶಕ್ಕೆ ಕೌಟುಂಬಿಕ ಪಕ್ಷಗಳು ಅಪಾಯಕಾರಿ ಎನ್ನುವುದನ್ನು ಜನ ಮನಗಂಡಿದ್ದಾರೆ. ದೇಶದ ಅಭಿವೃದ್ಧಿಗೆ ಬಿಜೆಪಿಯೇ ಬೇಕು ಎಂದು ಜನ ಭಾವಿಸಿದ್ದಾರೆ. ಮಾಧ್ಯಮಗಳಲ್ಲಿ ಸೈಲೆಂಟ್‌ ವೋಟರ್ಸ್‌ ಬಗ್ಗೆ ಈಗ ಸುದ್ದಿಯಾಗುತ್ತಿದೆ. ನಮ್ಮ ಕೆಲಸವನ್ನು ಮಹಿಳೆಯರು ಗಮನಿಸುತ್ತಿದ್ದಾರೆ. ನಮ್ಮ ಕೆಲಸವನ್ನು ಗುರುತಿಸಿದ ಕಾರಣ ಅವರು ನಮ್ಮ ಜೊತೆಯಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿದರೆ ಜನ ಮತ ಹಾಕುತ್ತಾರೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದು ಮೋದಿ ಈ ಗೆಲುವನ್ನು ಬಣ್ಣಿಸಿದರು.

Comments

Leave a Reply

Your email address will not be published. Required fields are marked *