ಕೇರಳ ವಿಮಾನ ದುರಂತದಲ್ಲಿ ಮಡಿದ ಪೈಲಟ್ ಪತ್ನಿಗೆ ಗಂಡು ಮಗು ಜನನ

ಮಥುರಾ: ಆಗಸ್ಟ್ 7ರಂದು ಕೇರಳದಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದ ಸಹ ಪೈಲಟ್ ಅಖಿಲೇಶ್ ಶರ್ಮಾ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅಖಿಲೇಶ್ ಕುಟುಂಬ ಮಥುರಾದ ಗೋವಿಂದ ನಗರದಲ್ಲಿ ವಾಸವಾಗಿದ್ದು, ಇದೀಗ ಮನೆಗೆ ಗಂಡು ಮಗುವಿನ ಆಗಮನದಿಂದ ಕುಟುಂಬಕ್ಕೆ ಕೊಂಚ ಸಂತಸ ದೊರೆತಿದೆ. ನವಜಾತ ಶಿಶು 2.75 ಕಿಲೋ ತೂಕವಿದೆ. ಶರ್ಮಾ ಪತ್ನಿ ಮೇಘಾ(28) ಅವರಿಗೆ ಶನಿವಾರ ಮಧ್ಯಾಹ್ನ 3.16ರ ಸುಮಾರಿಗೆ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಸಂಬಂಧ ಶರ್ಮಾ ಕುಟುಂಬ ಮಾತನಾಡಿ, ಗಂಡು ಮಗು ಹುಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಗಂಡು ಮಗುವಿನ ಮೂಲಕ ನಾವಿಂದು ಅಖಿಲೇಶ್ ನನ್ನು ಕಾಣುತ್ತೇವೆ. ಅಲ್ಲದೆ ಆತ ಈಗ ಜೀವಂತವಾಗಿ ಇರುತ್ತಿದ್ದರೆ ತುಂಬಾನೇ ಖುಷಿ ಪಡುತ್ತಿದ್ದ ಎಂದು ತಿಳಿಸಿದ್ದಾರೆ.

ಲಾಕ್‍ಡೌನ್ ನಿಂದಾಗಿ ದುಬೈನಲ್ಲಿ ಸಿಲುಕಿದ್ದ ಹಲವು ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿ ಕರೆತರಲಾಗಿತ್ತು. ಅಂತೆಯೇ ಆಗಸ್ಟ್ 7 ರಂದು ದುಬೈನಿಂದ ವಿಮಾನವೊಂದು ಹೊರಟಿತ್ತು. 190 ಪ್ರಯಾಣಿಕರನ್ನು ಹೊತ್ತು ತಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ರನ್‍ವೇಯಿಂದ ಜಾರಿ ಇಬ್ಭಾಗವಾಗಿತ್ತು. ಈ ಅವಘಡದಲ್ಲಿ ಪೈಲಟ್ ದೀಪಕ್ ಸಾಠೆ ಹಾಗೂ ಅಖಿಲೇಶ್ ಸೇರಿದಂತೆ 21 ಮಂದಿ ಮೃತಪಟ್ಟಿದ್ದರು.

Comments

Leave a Reply

Your email address will not be published. Required fields are marked *