ಕೇಜ್ರಿವಾಲ್ ಹೇಳಿಕೆಗೆ ಸಿಂಗಾಪುರ ಗುದ್ದು – ಭಾರತದಿಂದಲೂ ವಿರೋಧ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ‘ಸಿಂಗಾಪುರ ರೂಪಾಂತರಿ’ ವೈರಸ್ ಟ್ವೀಟ್‍ಗೆ ಸಿಂಗಾಪುರ ಸರ್ಕಾರ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆಗೆ ಭಾರತ ಸರ್ಕಾರವು ವಿರೋಧ ವ್ಯಕ್ತಪಡಿಸಿದೆ.

ಬುಧವಾರ ಕೇಜ್ರಿವಾಲ್ ಸಿಂಗಾಪುರ ರೂಪಾಂತರಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಮತ್ತು ಅಪಾಯಕಾರಿ. ಹೀಗಾಗಿ ಸಿಂಗಾಪುರದೊಂದಿಗೆ ವಾಯು ಸೇವೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ಈ ಟ್ವೀಟ್‍ಗೆ ಸಿಂಗಾಪುರ ಸರ್ಕಾರ ಭಾರತದ ರಾಯಭಾರಿಯನ್ನು ಕರೆಸಿ ಬಲವಾದ ಆಕ್ಷೇಪವನ್ನ ವ್ಯಕ್ತಪಡಿಸಿದೆ. ಈ ಸಂಬಂಧ ವಿದೇಶಾಂಗ ಮಂತ್ರಿ ಜೈ ಶಂಕರ್ ಟ್ವೀಟ್ ಮಾಡಿ, ಭಾರತ ಮತ್ತು ಸಿಂಗಾಪುರ ಕೋವಿಡ್ ವಿರುದ್ಧ ಜೊತೆಯಾಗಿ ಹೋರಾಟ ಮಾಡುತ್ತಿದೆ. ಲಾಜಿಸ್ಟಿಕ್ಸ್ ಹಬ್ ಮತ್ತು ಆಮ್ಲಜನಕ ಸರಬರಾಜು ವಿಚಾರದಲ್ಲಿ ಸಿಂಗಾಪುರದ ಪಾತ್ರದ ಬಗ್ಗೆ ನಮಗೆ ಮೆಚ್ಚುಗೆ ಇದೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳಿಂದ ದೀರ್ಘಕಾಲದ ಸಂಬಂಧಕ್ಕೆ ಹಾನಿಯಾಗುತ್ತದೆ. ಆದ್ದರಿಂದ ದೆಹಲಿ ಸಿಎಂ ಭಾರತದ ಪರವಾಗಿ ಮಾತನಾಡಿಲ್ಲ ಎಂಬುದನ್ನು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

ಸಿಂಗಾಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಪ್ರತಿಕ್ರಿಯಿಸಿ, ರಾಜಕಾರಣಿಗಳು ಸತ್ಯವನ್ನು ಒಪ್ಪಿಕೊಳ್ಳಬೇಕು. ಸಿಂಗಾಪುರ ರೂಪಾಂತರ ಇಲ್ಲ ಎಂದು ಕೇಜ್ರಿವಾಲ್ ಟ್ವೀಟ್‍ಗೆ ತಿರುಗೇಟು ನೀಡಿದ್ದಾರೆ.

ಈ ವೇಳೆ ಜೈಶಂಕರ್ ಟ್ವೀಟ್‍ಗೆ ಧನ್ಯವಾದ ಹೇಳಿದ ಅವರು, ನಾವು ಪರಸ್ಪರ ಸಹಾಯ ಮಡುವ ಮೂಲಕ ಆಯಾ ದೇಶಗಳಲ್ಲಿನ ಪರಿಹರಿಸಲು ಪ್ರಯತ್ನಿಸೋಣ. ಎಲ್ಲರೂ ಸುರಕ್ಷಿತವಾಗಿರುವವರೆಗೂ ಯಾರೂ ಸುರಕ್ಷಿತರಲ್ಲ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಹೇಳಿದ್ದು ಏನು?
ಸಿಂಗಾಪುರಕ್ಕೆ ಬಂದ ಹೊಸ ರೂಪದ ಕೊರೊನಾ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಇದು ಮೂರನೇ ಅಲೆಯಾಗಿ ಬರಬಹುದು. ಹೀಗಾಗಿ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸಿಂಗಾಪುರದೊಂದಿಗಿನ ವಾಯು ಸೇವೆಗಳನ್ನು ತಕ್ಷಣದಿಂದ ರದ್ದುಗೊಳಿಸಬೇಕು. ಮಕ್ಕಳಿಗೂ ಲಸಿಕೆ ನೀಡಬೇಕು ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *