ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು

– 4ಜಿ ಸೇವೆಗೆ ಚೀನಾದ ಉಪಕರಣ ಬಳಸದಂತೆ ಸೂಚನೆ

ನವದೆಹಲಿ: 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್)ಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಟೆಲಿಕಾಮ್ ಇಲಾಖೆ “ಚೀನಾ ವಸ್ತು ಬಹಿಷ್ಕಾರ”ದ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.

ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಸ್ತುತ ಚೀನಾ ಮೂಲದ ಹುವಾವೇ ಕಂಪನಿಯೊಂದಿಗೆ ಕೆಲಸ ಮಾಡುತ್ತಿವೆ. ಇತ್ತ ಬಿಎಸ್‍ಎನ್‍ಎಲ್‍ನೊಂದಿಗೆ ಝಡ್‍ಟಿಇ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚೀನಾದ ಸಂಸ್ಥೆಗಳು ತಯಾರಿಸುವ ಸಲಕರಣೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡವಂತೆ ಭಾರತದಲ್ಲಿರುವ ಖಾಸಗಿ ಕಂಪನಿಗಳಿಗೆ ಸಲಹೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷನೆ ಹಿನ್ನೆಲೆಯಲ್ಲಿ ಕೇಂದ್ರ ಮಧ್ಯೆ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಭಾರತ-ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ಲಡಾಖ್‍ನ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ನಿಯಂತ್ರಣ ರೇಖೆಯಲ್ಲಿ ಸಾವುನೋವುಗಳು ವರದಿಯಾಗಿವೆ.

ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಚೀನಾದ ವಸ್ತುಗಳನ್ನು ಬಳಸದಂತೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೆ ದೇಶದ ವಿವಿಧ ಮೂಲೆಯಲ್ಲಿ ಚೀನಾ ವಸ್ತು, ಸೇವೆಗಳ ಬಳಕೆ ನಿಷೇದಕ್ಕೆ ಕೂಗು ಕೇಳಿ ಬಂದಿದೆ.

Comments

Leave a Reply

Your email address will not be published. Required fields are marked *