ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲು

ಲಕ್ನೋ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಆಶೀಶ್ ಮಿಶ್ರಾ ಸೇರಿ ಹಲವರ ಹೆಸರು ಎಫ್‍ಐಆರ್‍ನಲ್ಲಿದೆ. ನಿನ್ನೆ ಹಲವು ರೈತರು ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಭೇಟಿ ವಿರೋಧಿಸಿ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅವರ ಮೇಲೆ ಎರಡು ಕಾರುಗಳು ಹರಿದಿದ್ದವು. ಅದು ಅಜಯ್ ಮಿಶ್ರಾ ಬೆಂಗಾವಲು ಪಡೆಯ ವಾಹನ ಮತ್ತು ಆಶೀಶ್ ಮಿಶ್ರಾರ ಕಾರು ಎಂದೂ ವರದಿಯಾಗಿತ್ತು.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರೈತ ಒಕ್ಕೂಟದ ಮುಖಂಡ ಡಾ. ದರ್ಶನ್ ಪಾಲ್, ರೈತರ ಮೇಲೆ ಹರಿದ ಕಾರಿನಲ್ಲಿ ಅಜಯ್? ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇದ್ದಿದ್ದನ್ನು ನಾವು ನೋಡಿದ್ದೇವೆ ಎಂದಿದ್ದಾರೆ. ನಾವು ಪ್ರತಿಭಟನೆ ನಡೆಸುವ ಸ್ಥಳಕ್ಕೆ ಆಗಮಿಸಲು ಮುಂದಾಗಿದ್ದ ಸಚಿವರ ಭೇಟಿ ವಿರೋಧಿಸಿದ್ದೆವು. ಹೆಲಿಪ್ಯಾಡ್‍ಗೆ ಘೇರಾವ್ ಹಾಕುವ ಪ್ರಯತ್ನ ನಮ್ಮದಾಗಿತ್ತು. ಈ ಪ್ರತಿಭಟನೆ ಮುಗಿಸಿ ರೈತರೆಲ್ಲ ವಾಪಸ್ ಹೋಗುವ ವೇಳೆ ಒಟ್ಟು ಮೂರು ಕಾರುಗಳು ರೈತರ ಕಡೆಗೆ ಬಂದವು. ಒಬ್ಬ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸಲಿಲ್ಲ ಎಂದು ಹೇಳಿದ್ದಾರೆ.

ಕಾರು ಹರಿದು ಇಬ್ಬರು ರೈತರು ಮೃತಪಟ್ಟ ಬೆನ್ನಲ್ಲೇ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದು, ಒಬ್ಬ ಪತ್ರಕರ್ತ, ನಾಲ್ವರು ರೈತರು ಸೇರಿ ಎಂಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಈಗ ಕೂಡ ಲಖಿಂಪುರ ಖೇರಿಯಲ್ಲಿ ಉದ್ವಿಗ ಪರಿಸ್ಥಿತಿ ಇದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *