ಕೇಂದ್ರದ ವಿರುದ್ಧ ರೈತರ ರಣಕಹಳೆ – ಭಾರತ್ ಬಂದ್‍ಗೆ ರಾಜಕೀಯ ಬಲ

– ರೈತರ ಬೇಡಿಕೆಗಳೇನು..?

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದ ರೀತಿಯಲ್ಲಿ ಅನ್ನದಾತರ ಹೋರಾಟ ಉಗ್ರ ಸ್ವರೂಪ ಪಡೆದಿದೆ. ಕೇಂದ್ರ ಸರ್ಕಾರ ಐದು ಬಾರಿ ಸಭೆ ನಡೆಸಿದ್ರೂ, ಬಯಸಿದ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಇಂದು ಭಾರತ್ ಬಂದ್‍ಗೆ ಕರೆ ನೀಡಿವೆ. ಈ ಬಂದ್‍ಗೆ ದೇಶವ್ಯಾಪಿ ಬೆಂಬಲ ಸಿಕ್ಕಿದೆ.

ಎನ್‍ಡಿಎಯೇತರ ಪಕ್ಷಗಳು ಭಾರತ್ ಬಂದ್‍ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿ, ಸಮಾಜವಾದಿ ಪಕ್ಷ, ಡಿಎಂಕೆ, ಆರ್‍ಜೆಡಿ, ತೃಣಮೂಲ ಕಾಂಗ್ರೆಸ್, ಎಎಪಿ, ಗುಪ್ಕಾರ್ ಕೂಟ, ಎಡಪಕ್ಷಗಳು, ಶಿರೋಮಣಿ ಅಕಾಲಿ ದಳ, ಬಿಎಸ್‍ಪಿ, ಜೆಡಿಎಸ್, ಟಿಆರ್‍ಎಸ್, ತೆಲುಗುದೇಶಂ ಸೇರಿದಂತೆ ಹಲವು ಪಕ್ಷಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಹೀಗಾಗಿ ಬಿಜೆಪಿಯೇತರ ರಾಜ್ಯಗಳಲ್ಲಿ ಬಂದ್ ತೀವ್ರತೆ ಹೆಚ್ಚು ಕಂಡು ಬರಲಿದೆ.

ಎನ್‍ಡಿಎ ಅಂಗಪಕ್ಷ ಆರ್‍ಎಲ್‍ಪಿ ಕೂಡ ರೈತರಿಗೆ ಬೆಂಬಲ ಸೂಚಿಸಿದೆ. ಕೃಷಿ ಕಾಯ್ದೆಗಳನ್ನು ಅಂಬಾನಿ-ಅದಾನಿ ಕಾಯ್ದೆ ಎಂದು ಬಣ್ಣಿಸಿರುವ ರಾಹುಲ್ ಗಾಂಧಿ, ಕೂಡಲೇ ಅವುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ನಾಳೆ ರಾಷ್ಟ್ರಪತಿಗಳ ಭೇಟಿಗೆ ಶರದ್ ಪವಾರ್ ಮುಂದಾಗಿದ್ದಾರೆ. ಲಾರಿ ಮಾಲೀಕರ ಸಂಘ, 10 ಕಾರ್ಮಿಕ ಸಂಘಟನೆಗಳು, ಬ್ಯಾಂಕ್ ಯೂನಿಯನ್ ಸೇರಿ ಇತರೆ ಹಲವು ಸಂಘಟನೆಗಳು ರೈತರ ಪರ ದನಿ ಎತ್ತಿವೆ.

ಬಾಲಿವುಡ್‍ನ ಪ್ರಿಯಾಂಕಾ ಚೋಪ್ರಾ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಸೇರಿ ಹಲವರು ಬಂದ್‍ಗೆ ಬೆಂಬಲ ಸೂಚಿಸಿದ್ದಾರೆ. ಅನ್ನದಾತನ ಚಳುವಳಿಗೆ ಬೆಂಬಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ.

* ಎಲ್ಲೆಲ್ಲ ಕಂಪ್ಲೀಟ್ ಬಂದ್: ಪಂಜಾಬ್, ದೆಹಲಿ, ಮಹಾರಾಷ್ಟ್ರ, ಕೇರಳ, ಪುದುಚ್ಚೆರಿ, ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ, ಛತ್ತೀಸ್‍ಘಡ, ಜಮ್ಮು ಕಾಶ್ಮೀರ, ಜಾರ್ಖಂಡ್ ನಲ್ಲಿ ಕಂಪ್ಲೀಟ್ ಬಂದ್ ಆಗಲಿದೆ.

* 50-50 ಬಂದ್: ಕರ್ನಾಟಕ, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ್, ಒಡಿಶಾ, ಗುಜರಾತ್, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ 50-50 ಬಂದ್ ಆಗಲಿದೆ.

ಅನ್ನದಾತರ ಬೇಡಿಕೆಯೇನು..?
* ಕೇಂದ್ರ ಜಾರಿಗೆ ತಂದ ಕಾಯ್ದೆಗಳ ತಿದ್ದುಪಡಿಗೂ ಒಪ್ಪಲ್ಲ
* ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು
* ಕೃಷಿ ಬೆಳೆಗಳಿಗೆ ನ್ಯಾಯಯುತವಾಗಿ ಬೆಂಬಲ ಬೆಲೆ ನಿಗದಿ ಆಗಬೇಕು
* ಹೊಸ ಕೃಷಿ ಕಾಯ್ದೆಗಳು ಜಾರಿ ಆಗಬೇಕು
* ನೂತನ ಕೃಷಿ ಕಾಯ್ದೆ ರಚಿಸಲು ರೈತ ಆಯೋಗ ರಚಿಸಬೇಕು
* ರೈತ ಆಯೋಗದಲ್ಲಿ ರೈತರಷ್ಟೇ ಇರಬೇಕು. ಉನ್ನಾಧಿಕಾರಿಗಳು, ತಜ್ಞರು ಇರಬಾರದು.
* ರೈತರೇ ರೂಪಿಸಿದ ಕೃಷಿ ಕಾಯ್ದೆಯನ್ನು ಸಂಸತ್‍ನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು.

Comments

Leave a Reply

Your email address will not be published. Required fields are marked *