ಕೇಂದ್ರಕ್ಕೆ ರಾಜ್ಯ ಸರ್ಕಾರಗಳ ವರದಿ- ಶೀಘ್ರವೇ ಲಾಕ್‍ಡೌನ್ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ನವದೆಹಲಿ: ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿವೆ. ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಸಭೆಯಲ್ಲಿ ಲಿಖಿತ ರೂಪದ ವರದಿ ಕೇಳಿದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಇಲಾಖೆಗೆ ಈ ವರದಿಗಳು ಸೇರಲಿದೆ.

ಈಗಾಗಲೇ ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಇನ್ನೂ ಹಲವು ರಾಜ್ಯಗಳು ವರದಿ ಇಂದು ಸಲ್ಲಿಕೆ ಮಾಡಲಿದೆ. ಈ ವರದಿ ಆಧರಿಸಿ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಬಹುದು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರು ಹಾಗೂ ಟಾಸ್ಕ್ ಫೋರ್ಸ್ ನ ಸದಸ್ಯರ ಸಭೆ ಬಳಿಕ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪ್ರಮುಖ ಕೇಂದ್ರ ಸಚಿವರ ಸಭೆ ನಡೆಯಲಿದೆ. ದೆಹಲಿ ನಿರ್ಮಾಣ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ.ಹರ್ಷವರ್ಧನ್, ನಾಗರಿಕ ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪೂರಿ ಸೇರಿದಂತೆ ಹಲವು ಪ್ರಮುಖ ಸಚಿವರು ಭಾಗಿಯಾಗಲಿದ್ದು ಲಾಕ್ ಡೌನ್ ವಿನಾಯತಿ ಮತ್ತು ಮುಂದಿನ ಪರಿಸ್ಥಿತಿಗಳ ನಿರ್ವಹಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಈಗಾಗಲೇ ನಾಲ್ಕನೇ ಹಂತದ ಲಾಕ್ಡೌನ್ ಗೆ ಬಹುತೇಕ ನಿಯಮಗಳು ಸಿದ್ಧವಾಗಿದ್ದು ಇಂದು ರಾಜ್ಯ ಸರ್ಕಾರಗಳ ವರದಿ ಆಧರಿಸಿ ಕೆಲ ಬದಲಾವಣೆಗಳು ಹಾಗೂ ಕೇಂದ್ರ ಸಚಿವರ ಶಿಫಾರಸುಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಬಹುತೇಕ ಇಂದು ಮಾರ್ಗಸೂಚಿಗಳ ಪಟ್ಟಿ ಅಂತಿಮ ಸ್ವರೂಪ ಪಡೆಯಲಿದ್ದು ಇಂದು ಸಂಜೆಯೇ ಅಥವಾ ನಾಳೆ ಬಿಡುಗಡೆಯಾಗಬಹುದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

Comments

Leave a Reply

Your email address will not be published. Required fields are marked *