ಕೆಸಿ ವ್ಯಾಲಿ ನೀರಿಗೆ ಪಂಪ್‌ ಹಾಕಿ ರೈತರಿಂದ ಬಳಕೆ – ಮಾಧುಸ್ವಾಮಿ

– ಶೀಘ್ರವೇ ಸಮಸ್ಯೆಗೆ ಪರಿಹಾರ

ಬೆಂಗಳೂರು: ಕೋರಮಂಗಲ ಚಲ್ಲಘಟ್ಟ ವ್ಯಾಲಿ (ಕೆಸಿ ವ್ಯಾಲಿ) ನೀರನ್ನ ರೈತರು ಪಂಪ್ ಮೂಲಕ ನೇರವಾಗಿ ಬಳಕೆ ಮಾಡಿಕೊಳ್ತಿದ್ದಾರೆ ಅಂತ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ಅಡಿ ಬಿಜೆಪಿ ನಾರಾಯಣಸ್ವಾಮಿ ವಿಷಯ ಪ್ರಸ್ತಾಪ ಮಾಡಿ, ಕೆಸಿ ವ್ಯಾಲಿ 400 ದಶಲಕ್ಷ ಲೀಟರ್( ಎಂಎಲ್‌ಡಿ) ನೀರು ತುಂಬಿಸುವ ಯೋಜನೆ. ಆದರೆ 294 ಎಂಎಲ್‌ಡಿ ನೀರು ಮಾತ್ರ ಹೋಗುತ್ತಿದೆ. 126 ಕೆರೆಗೆ ನೀರು ಹೋಗಬೇಕಿತ್ತು. ಈಗ ಕೇವಲ 82 ಕೆರೆಗಳಿಗೆ ಮಾತ್ರ ಹೋಗುತ್ತಿದೆ. ಜಲ ಮಂಡಳಿ ಮತ್ತು ಸಣ್ಣ ನಿರಾವರಿ ಇಲಾಖೆಗಳ ಕಿತ್ತಾಟದಿಂದ 100 ಎಂಎಲ್‌ಡಿ ನೀರು ನಷ್ಟವಾಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯ ಮಾಡಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ಜಲ ಮಂಡಳಿ ಪ್ರಕಾರ 380 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ. ನೀರಿನ ಪ್ರಮಾಣ ನಮಗೆ ಕಡಿಮೆ ಆಗುತ್ತಿದೆ. ಸಮಗ್ರ ಯೋಜನೆ ಪ್ರಕಾರ( ಡಿಪಿಆರ್) ಪ್ರಕಾರ ಶೇ.50 ಕೆರೆ ಮಾತ್ರ ತುಂಬಿಸಬೇಕು. ಶೇ.50 ತುಂಬಿದ ಬಳಿಕ ಮುಂದಿನ ಕೆರೆಗೆ ಹರಿಸಬೇಕಿತ್ತು. ಆದರೆ ಸ್ಥಳೀಯರು ಕೆರೆ ತುಂಬೋವರೆಗೂ ನೀರು ಮುಂದೆ ಬಿಡುತ್ತಿಲ್ಲ ಎಂದರು.

ಕೆಸಿ ವ್ಯಾಲಿ ನೀರನ್ನು ನೇರವಾಗಿ ರೈತರು ಪಂಪ್ ಹಾಕಿ ನೀರು ತೆಗೆಯುತ್ತಿದ್ದಾರೆ‌. ಇದಕ್ಕೆ ಕಾನೂನು ಇದ್ದರು ಏನು ಪ್ರಯೋಜನ ಆಗಿಲ್ಲ. ಜಲ ಮಂಡಳಿ ಅಧಿಕಾರಿಗಳ ಸಭೆ ಇನ್ನೊಂದು ವಾರದಲ್ಲಿ ಕರೆದು ಸಮಸ್ಯೆ ಬಗ್ಗೆ ಪರಿಹಾರ ಮಾಡುತ್ತೇವೆ ಎಂದು ಉತ್ತರ ನೀಡಿದರು.

KC Valley water lake

Comments

Leave a Reply

Your email address will not be published. Required fields are marked *