ಕೆಎಸ್ಆರ್‌ಟಿಸಿ ನಷ್ಟಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಕಾರಣ: ಸಿಎಂ

– ಹೆಚ್‍ಡಿಕೆ ಬಗ್ಗೆ ಕೋಡಿಹಳ್ಳಿ ಹೇಳಿಕೆಗೆ ಸಿಎಂ ಖಂಡನೆ

ಬೆಂಗಳೂರು: ಸಾರಿಗೆ ಬಸ್ಸಿಗೆ ಕಲ್ಲು ತೂರಾಟ ಮಾಡುವ ಮೂಲಕ ಆಸ್ತಿಪಾಸ್ತಿ ನಷ್ಟ ಉಂಟಾಗಲು ಕೋಡಿಹಳ್ಳಿ ಚಂದ್ರಶೇಖರ್ ಅವರೇ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ, ಅವಶ್ಯಕ ಸೇವೆಯಡಿ ಬರುವ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಈ ಮುಷ್ಕರದಿಂದ ರಾಜ್ಯದೆಲ್ಲೆಡೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈಗಾಗಲೇ ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ ಸಲಹೆ ಸೂಚನೆಗಳನ್ನು ನೀಡಿದ್ದೇವೆ. ಲಕ್ಷ್ಮಣ್ ಸವದಿ ಕೂಡ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ರೈತ ಸಂಘದ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ದುರುದ್ದೇಶದಿಂದ ಕೆಲವು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಮುಷ್ಕರ ನಡೆಸಲು ಮತ್ತು ರಾಜ್ಯದ ವಿವಿಧೆಡೆ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಚೋದಿಸಿ ಸಾರ್ವಜನಿಕ ಆಸ್ತಪಾಸ್ತಿಗೆ ನಷ್ಟ ಉಂಟಾಗಲು ಕಾರಣಕರ್ತರಾಗಿರುತ್ತಾರೆ.

ಅಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಅತ್ಯಂತ ಲಘುವಾಗಿ ಮಾತನಾಡಿರುವುದು ಕೂಡ ಖಂಡನೀಯವಾಗಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ಸತ್ಯಾಗ್ರಹವನ್ನು ನಿಲ್ಲಿಸಿ ಕರ್ತವ್ಯಕ್ಕೆ ಮರಳಿ ನಂತರ ಸಾರಿಗೆ ಸಚಿವರ ಜೊತೆ ಚರ್ಚೆಗೆ ಬರಲು ಮತ್ತೊಮ್ಮೆ ಮನವಿ ಮಾಡುವುದಾಗಿ ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *