ಕೃಷಿ ಕಾನೂನು ವಿರೋಧ ಪ್ರತಿಭಟನೆ ರೈತರ ಪರ ಹೋರಾಟವಲ್ಲ: ಸಿ.ಟಿ ರವಿ

– ಬೀದಿಯಲ್ಲಿ ಕೂತು ಕಾನೂನು ಮಾಡುವುದು ಅಲ್ಲ

ನವದೆಹಲಿ: ರಾಜ್ಯದಲ್ಲಿ ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ಹೋರಾಟ ರೈತರ ಪರ ಪ್ರತಿಭಟನೆಯಲ್ಲ, ಇದು ಕಾಂಗ್ರೆಸ್ ಪ್ರತಿಭಟನೆಯಾಗಿದೆ. ಕಾಂಗ್ರೆಸ್ ಎಲ್ಲವನ್ನು ವಿರೋಧಿಸುತ್ತದೆ ಎಂದು ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ಹೋರಾಟ ರೈತ ಪರವಾಗಿಲ್ಲ. ಕಾಂಗ್ರೆಸ್ ಪ್ರತಿಯೊಂದು ವಿಚಾರವನ್ನು ವಿರೋಧಿಸುತ್ತದೆ. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಅಪಸ್ವರ ಎತ್ತಿತ್ತು. ಯಾವ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಆ್ಯಕ್ಟ್ ರದ್ದು ಮಾಡ್ತೀವಿ ಅಂತ ಹೇಳಿತ್ತೋ ಅದೇ ಪಕ್ಷ ಈಗ ವಿರೋಧಿಸುತ್ತಿದೆ. ಅವರಿಗೆ ವಿರೋಧಿಸೋಕೆ ಏನು ನೈತಿಕತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಹೋರಾಟ ದಲ್ಲಾಳಿಗಳ ಪರವಾಗಿದೆ. ಹಿಂದೆ ದಲ್ಲಾಳಿ ಒತ್ತಡಕ್ಕೆ ಮಣಿದು ಕಾನೂನು ಜಾರಿ ಮಾಡದೇ ಕೈ ಬಿಟ್ಟಿತ್ತು. ಈಗ ಮೋದಿ ಸರ್ಕಾರ ಅದನ್ನು ಜಾರಿ ತಂದಿದೆ. ರೈತರಿಗೆ ಸರ್ಕಾರ ಸ್ವಾತಂತ್ರ್ಯ ಕೊಟ್ಟಿದೆ. ಸರ್ಕಾರ ರೈತನ ಆದಾಯ ದುಪ್ಪಟ್ಟು ಮಾಡಲು ಪ್ರಯತ್ನ ಮಾಡುತ್ತಿದೆ. ಈ ಕಾನೂನು ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿದು ಬರಲು ಸಹಕಾರಿ ಆಗಲಿದೆ. ದೆಹಲಿಯಲ್ಲಿ ನಡೆಯುತ್ತಿರುವುದು ಸಂಘಟಿತ ಹೋರಾಟವಾಗಿದೆ. ರೈತರ ಹೆಸರಿನಲ್ಲಿ ಕೆಲವರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕುರಿತಾಗಿ ಮಾತುಕತೆ ಸರ್ಕಾರ ಸಿದ್ಧವಿದೆ ಮತ್ತು ಬದಲಾವಣೆಗೂ ಸಿದ್ಧವಿದೆ. ಆದರೆ ವಾದ, ಬ್ಲಾಕ್ ಮೇಲ್ ಮಾಡಿದರೆ ನಡೆಯುವುದಿಲ್ಲ. ಕಾನೂನು ಮಾಡುವುದು ಸಂಸತ್ತು, ಬೀದಿಯಲ್ಲಿ ಕೂತು ಕಾನೂನು ಮಾಡುವುದು ಅಲ್ಲ. ಜನರು ನಮಗೆ ಅಧಿಕಾರ ನೀಡಿದ್ದಾರೆ. ಜನ ವಿರೋಧಿ ಅನ್ನೋದಾದರೆ ಚರ್ಚೆ ಮಾಡಲಿ. ಸುಪ್ರೀಂಕೋರ್ಟ್ ಸಮಿತಿಗೂ ಮಾನ್ಯ ಮಾಡಿಲ್ಲ, ಆದರೆ ಎಲ್ಲದಕ್ಕೂ ವಿರೋಧ ಮಾಡುವುದು, ಭಯ ಹುಟ್ಟಿಸುವುದು ಅರಾಜಕತೆ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *