ಕುಸಿದ ಡೆಲ್ಲಿಗೆ ಪಂತ್, ಐಯ್ಯರ್ ಆಸರೆ – ಐದನೇ ಬಾರಿ ಟ್ರೋಫಿ ಗೆಲ್ಲಲು ಮುಂಬೈಗೆ 157 ರನ್‍ಗಳ ಗುರಿ

– ಬೌಲ್ಟ್ ದಾಳಿಗೆ ಮತ್ತೆ ತತ್ತರಿಸಿದ ಕ್ಯಾಪಿಟಲ್ಸ್ ಟಾಪ್ ಆರ್ಡರ್

ದುಬೈ: ಇಂದು ನಡೆಯುತ್ತಿರುವ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ 157 ರನ್‍ಗಳ ಟಾರ್ಗೆಟ್ ನೀಡಿದೆ.

ಇಂದು ದುಬೈ ಮೈದಾನದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಆರಂಭದಲ್ಲೇ ಟ್ರೆಂಟ್ ಬೌಲ್ಟ್ ಅವರ ದಾಳಿಗೆ ನಲುಗಿ ಬೇಗ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ (65 ರನ್, 50 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ರಿಷಭ್ ಪಂತ್ ತಲಾ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನ ಮೇಲೆತ್ತಿದರು. ಪರಿಣಾಮ ಪ್ರಮುಖ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡಕ್ಕೆ 157 ರನ್‍ಗಳ ಗುರಿ ನೀಡಿತು.

ಬೌಲ್ಟ್ ದಾಳಿ
ಕ್ವಾಲಿಫೈಯರ್-1ರಲ್ಲಿ ಡೆಲ್ಲಿ ತಂಡವನ್ನು ಕಾಡಿದ್ದ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಟಾಪ್ ಆರ್ಡರ್ ಗೆ ಮುಳುವಾದರು. ನಾಲ್ಕು ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ 30 ರನ್ ನೀಡಿ ಮೂರು ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಥನ್ ಕೌಲ್ಟರ್-ನೈಲ್ ಎರಡು ವಿಕೆಟ್ ಪಡೆದು ಮಿಂಚಿದರು. ಜಯಂತ್ ಯಾದವ್ ಒಂದು ವಿಕೆಟ್ ಪಡೆದುಕೊಂಡರು. ಜಸ್ಪ್ರೀತ್ ಬುಮ್ರಾಗೆ ಇಂದು ಯಾವುದೇ ವಿಕೆಟ್ ಬೀಳಲಿಲ್ಲ.

ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ವೇಗಿ ಟ್ರೆಂಟ್ ಬೌಲ್ಟ್ ಮೊದಲ ಬಾಲಿನಲ್ಲೇ ಶಾಕ್ ನೀಡಿದರು. ಈ ಮೂಲಕ ಆರಂಭಿಕನಾಗಿ ಬಂದ ಮಾರ್ಕಸ್ ಸ್ಟೋಯಿನಿಸ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ನಂತರ ಬಂದ ಅಜಿಂಕ್ಯ ರಹಾನೆ ಕೂಡ 2 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಅವರ ಬೌಲಿಂಗ್‍ನಲ್ಲಿ ಡಿ ಕಾಕ್‍ಗೆ ಕ್ಯಾಚ್ ಕೊಟ್ಟು ಹೊರನಡೆದರು.

ಬೌಲ್ಟ್ ನಂತರ ದಾಳಿಗಿಳಿದ ಜಯಂತ್ ಯಾದವ್ ಇನ್ ಫಾರ್ಮ್ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. ಪವರ್ ಪ್ಲೇ ಹಂತದಲ್ಲಿ ಎಡವಿದ ಡೆಲ್ಲಿ ಆರು ಓವರ್ ಮುಕ್ತಾಯಕ್ಕೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 41 ರನ್ ಪೇರಿಸಿತು. ನಂತರ ಜೊತೆಯಾದ ನಾಯಕ ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಸೇರಿಕೊಂಡು ತಾಳ್ಮೆಯ ಆಟದ ಜೊತೆಗೆ ರನ್ ಕಲೆ ಹಾಕಿದರು. ಜೊತೆಗೆ ಅರ್ಧಶತಕದ ಜೊತೆಯಾಟವಾಡಿದರು.

ಪಂತ್ ಮತ್ತು ಐಯ್ಯರ್ ಉತ್ತಮ ಆಟದ ಫಲವಾಗಿ ಆರಂಭದಲ್ಲೇ ಕುಸಿದಿದ್ದ ಡೆಲ್ಲಿ ತಂಡ 13 ಓವರಿನಲ್ಲಿ 100 ರನ್ ಸಿಡಿಸಿತು. ಇದೇ ವೇಳೆ 35 ಬಾಲಿಗೆ ರಿಷಭ್ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಪಂತ್ ಬೌಂಡರಿ ಗೆರೆ ಬಳಿ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ಆರಂಭದಿಂದ ತಾಳ್ಮೆಯಿಂದ ಆಡಿ ತಂಡಕ್ಕೆ ನೆರವಾಗಿದ್ದ ಐಯ್ಯರ್ 40 ಬಾಲಿನಲ್ಲಿ ಅರ್ಧಶತಕ ಸಿಡಿಸಿದರು. ಶಿಮ್ರಾನ್ ಹೆಟ್ಮಿಯರ್ ಐದು ರನ್ ಸಿಡಿಸಿ ಔಟ್ ಆದರು. ನಂತರ ಆಕ್ಸಾರ್ ಪಟೇಲ್ ಮತ್ತು ರಬಾಡಾ ಔಟ್ ಆಗಿ ಹೊರನಡೆದರು.

Comments

Leave a Reply

Your email address will not be published. Required fields are marked *