– ಕೊರೊನಾ ಬಂದು ಸಾವನ್ನಪ್ಪಿರಬಹುದೆಂಬ ಭಯದಿಂದ ಜೆಸಿಬಿಯಲ್ಲಿ ಸಾಗಾಟ
ಚಿಕ್ಕಬಳ್ಳಾಪುರ: ಮಹಿಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಸಾವನ್ನಪ್ಪಿದ್ದು, ಕೊರೊನಾ ಬಂದು ಸಾವನ್ನಪ್ಪಿರಬಹುದೆಂದು ಜೆಸಿಬಿಯಲ್ಲಿ ಮೃತದೇಹ ಸಾಗಿಸಿರುವ ಅಮಾನವೀಯ ಘಟನೆ ಜಿಲ್ಲೆಯ ಚಿಂತಾಮಣಿಯ ಕುರಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿನ ಟೈಲರ್ ಶಾಪ್ ಬಳಿ ಮಹಿಳೆ ಚಂದ್ರಕಲಾ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರಿಂದ ಕೊರೊನಾ ಬಂದು ಕುಸಿದು ಬಿದ್ದು ಸಾವನ್ನಪ್ಪಿರಬಹುದೆಂದು ಗ್ರಾಮಸ್ಥರು ಮೃತದೇಹವನ್ನು ಜೆಸಿಬಿ ಮೂಲಕ ಶವಗಾರಕ್ಕೆ ರವಾನಿಸಿದ್ದಾರೆ.

ಕುಸಿದು ಬಿದ್ದ ತಕ್ಷಣ ಬೇರೆ ವಾಹನ ಸಿಗದೆ ಆತಂಕದಿಂದ ಜೆಸಿಬಿ ಮೂಲಕ ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಸಾಗಾಟ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಸಂಬಂಧ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಅದೇ ಜೆಸಿಬಿಯಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಕುರಟಹಳ್ಳಿ ಗ್ರಾಮಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆ.
ಮೃತದೇಹವನ್ನು ಗೌರವಯುತವಾಗಿ ಶವಾಗಾರಕ್ಕೆ ರವಾನೆ ಮಾಡಬೇಕಾಗಿತ್ತು. ಆದರೆ ಕೋವಿಡ್ ಭಯದಿಂದ ಜನ ಜೆಸಿಬಿಯಲ್ಲಿ ಮೃತದೇಹ ಸಾಗಾಟ ಮಾಡಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೆಸಿಬಿಯಲ್ಲಿ ಸಾಗಿಸಿದ ಕ್ರಮದ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ಮಹಿಳೆ ಪತಿಯನ್ನು ಕಳೆದುಕೊಂಡಿದ್ದಳು. ಮಹಿಳೆಗೆ ಒಂದು ಗಂಡು ಮತ್ತೊಂದು ಹೆಣ್ಣು ಇಬ್ಬರು ಮಕ್ಕಳಿದ್ದು, ಗಂಡು ಮಗುವನ್ನು ಸಂಬಂಧಿಕರಿಗೆ ಕೊಟ್ಟಿದ್ದರು. ಕುರುಟಹಳ್ಳಿ ಗ್ರಾಮ ತೊರೆದು ಮಗಳೊಂದಿಗೆ ಚಿಂತಾಮಣಿಯಲ್ಲಿ ವಾಸವಿದ್ದರು. ಆದರೆ ಅನಾರೋಗ್ಯಕ್ಕೀಡಾದ ದಿನ ಕುರುಟಹಳ್ಳಿಗೆ ಹೋಗಿದ್ದರು.

Leave a Reply