ಕುಸಿತ ಕಂಡರೂ ಪೂಜಾರಾ, ಪಂತ್ ಆಸರೆ – ಫಾಲೋ ಆನ್ ಭೀತಿಯಲ್ಲಿ ಭಾರತ

– ಏಕದಿನದಂತೆ ಬ್ಯಾಟ್ ಬೀಸಿದ ರಿಷಭ್ ಪಂತ್
– ಫಾಲೋ ಆನ್ ಭೀತಿಯಿಂದ ಪಾರಾಗಲು ಬೇಕಿದೆ 122 ರನ್

ಚೆನ್ನೈ: ಆರಂಭದಲ್ಲಿ ಕುಸಿತ ಕಂಡರೂ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರಾ ಅವರ ಶತಕದ ಜೊತೆಯಾಟದಿಂದ ಭಾರತ ಇಂಗ್ಲೆಂಡಿಗೆ ಪ್ರತಿರೋಧ ತೋರಿದ್ದರೂ ಫಾಲೋ ಆನ್ ಭೀತಿಗೆ ಸಿಲುಕಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿದ್ದ ಇಂಗ್ಲೆಂಡ್ ಮೂರನೇ ದಿನ ಆ ಮೊತ್ತಕ್ಕೆ 23ರನ್ ಸೇರಿಸಿ 578 ರನ್‍ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್‍ಗಿಳಿದ ಭಾರತ ತಂಡ ಆರಂಭದಿಂದಲೇ ಕುಸಿತಕ್ಕೆ ಒಳಗಾಯಿತು. ಟಾಪ್ ಆಡರ್ ಬ್ಯಾಟ್ಸ್‌ಮ್ಯಾನ್ ಗಳಾದ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ 73 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ರೋಹಿತ್ ಶರ್ಮಾ 4 ರನ್, ಶುಭಮ್ ಗಿಲ್ 29 ರನ್, ವಿರಾಟ್ ಕೊಹ್ಲಿ 11 ರನ್, ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಔಟಾದಾಗ ಭಾರತ ಸುಲಭವಾಗಿ ಆಲೌಟ್ ಆಗಿ ಫಾಲೋ ಆನ್ ಭೀತಿಗೆ ತುತ್ತಾಗುತ್ತಾ ಎಂಬ ಪ್ರಶ್ನೆ ಎದ್ದಿತ್ತು.

ಈ ಸಂದರ್ಭದಲ್ಲಿ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರಾ ಶತಕದ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. ಈ ಜೋಡಿ 5ನೇ ವಿಕೆಟ್‍ಗೆ 145 ಎಸೆತಗಳಲ್ಲಿ 119ರನ್ ಸೇರಿಸಿತು.

73ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪೂಜಾರಾ ಔಟ್ ಆಗುತ್ತಿದ್ದಂತೆ, ಅವರ ಹಿಂದೆಯೆ ಪಂತ್ ಕೂಡ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಏಕದಿನದಂತೆ ಬ್ಯಾಟ್ ಬೀಸಿದ ರಿಷಭ್ ಪಂತ್ 91ರನ್ (88 ಎಸೆತ, 9 ಬೌಂಡರಿ, 5 ಸಿಕ್ಸರ್) ಮತ್ತು ಚೇತೇಶ್ವರ ಪೂಜಾರಾ 73ರನ್ (143 ಎಸೆತ, 11 ಬೌಂಡರಿ) ಸಿಡಿಸಿ ಔಟಾದರು.

ದಿನದಾಟದ ಅಂತ್ಯಕ್ಕೆ ಭಾರತ ತಂಡ 6 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿದೆ. ವಾಷಿಂಗ್ಟನ್ ಸುಂದರ್ 33ರನ್ (88 ಎಸೆತ, 5 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 8ರನ್(54 ಎಸೆತ) ಮಾಡಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಪರ ಡೋಮ್ ಬೆಸ್ 23 ಓವರ್ ಬೌಲಿಂಗ್ ಮಾಡಿ 55ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಇನ್ನೆರಡು ವಿಕೆಟ್ ಜೋಫ್ರಾ ಆರ್ಚರ್ ಪಾಲಾಗಿದೆ. ಭಾರತ ಫಾಲೋ -ಆನ್ ಭೀತಿಯಿಂದ ಪಾರಾಗಬೇಕಾದರೆ 379 ರನ್ ಹೊಡೆಯಬೇಕು.

Comments

Leave a Reply

Your email address will not be published. Required fields are marked *