ಚಾಮರಾಜನಗರ: ಕುರಿ ಕದ್ದ ಕಳ್ಳರ ಹಿಂದೆ ಬೀಳುವ ಪೊಲೀಸರು ಕೆಲವೊಮ್ಮೆ ಕುರಿ ಮಾಲೀಕರ ಹುಡುಕಾಟವನ್ನೂ ನಡೆಸಬೇಕಾಗುತ್ತದೆ. ಇಂತಹದ್ದೊಂದು ಘಟನೆ ತಾಲೂಕಿನ ಸಂತೇಮರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಈಗ ಕುರಿ ಮಾಲೀಕರ ಹುಡುಕಾಟದಲ್ಲಿ ತೊಡಗಿದ್ದಾರೆ.

ಶುಕ್ರವಾರ ರಾತ್ರಿ ಕಾವುದವಾಡಿ-ಸಂತೇಮರಹಳ್ಳಿ ರಸ್ತೆಯಲ್ಲಿ ಇಬ್ಬರು ಯುವಕರು ಬೈಕ್ ನಲ್ಲಿ 3 ಕುರಿಗಳನ್ನು ಹೊತ್ತೊಯ್ಯುತ್ತಿದ್ದರು. ಅದೇ ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನ ಮೂಡಿ, ಅವರನ್ನು ಹಿಂಬಾಲಿಸಲು ಶುರು ಮಾಡಿದ್ದಾರೆ. ಬೆನ್ನುಬಿದ್ದ ಪೊಲೀಸರನ್ನು ನೋಡಿ ಭಯಗೊಂಡ ಕಳ್ಳರು, ಮಹದೇಶ್ವರ ದೇವಸ್ಥಾನದ ಬಳಿ ಕುರಿಗಳನ್ನು ಎಸೆದು ವೇಗವಾಗಿ ಪರಾರಿಯಾಗಿದ್ದಾರೆ.

ಕಳ್ಳರು ತಪ್ಪಿಸಿಕೊಂಡ ಬಳಿಕ ಅವರು ಬಿಟ್ಟು ಹೋಗಿದ್ದ 3 ಕುರಿಗಳನ್ನು ಪೊಲೀಸರು ಠಾಣೆಗೆ ತಂದು ಆವರಣದಲ್ಲಿ ಕಟ್ಟಿ ಮೇವು ಹಾಕಿದ್ದಾರೆ. ಕಳ್ಳರು ಯಾವ ಊರಿನಲ್ಲಿ, ಯಾರ ಕುರಿ ಕದ್ದಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ತಮ್ಮ ಕುರಿಗಳು ಕಳ್ಳತನ ಆಗಿರುವುದಾಗಿ ಯಾರೂ ದೂರು ನೀಡಲು ಠಾಣೆಗೂ ಬಂದಿಲ್ಲ. ಹೀಗಾಗಿ ಪೊಲೀಸರು ಕುರಿಗಳ ಮಾಲೀಕರ ಹುಡುಕಾಟದಲ್ಲಿ ತೊಡಗಿದ್ದಾರೆ.

Leave a Reply