ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಂಡು ನೋಡಿಕೊಂಡಂತೆ ಕಾಂಗ್ರೆಸ್ ವರ್ತಿಸ್ತಿದೆ – ವಿಜಯೇಂದ್ರ ಟಾಂಗ್

ಬೆಂಗಳೂರು: ಬೆಂಗಳೂರಿನ ಗಲಭೆ ಕುರಿತಂತೆ ಒಂದು ಜವಾಬ್ದಾರಿ ವಿರೋಧ ಪಕ್ಷದಂತೆ ನಡೆದುಕೊಳ್ಳಿ ಎಂದು ವಿಜಯೇಂದ್ರ ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.

ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಪಕ್ಷದ ನಿಯೋಗ ಅಮಾಯಕರನ್ನು ಬಂಧಿಸದಂತೆ ಮನವಿ ಮಾಡಿತ್ತು. ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಅವರು, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಂಡು ನೋಡಿಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್‍ಪಂತ್ ತಿರುಗೇಟು

ಟ್ವೀಟ್‍ನಲ್ಲೇನಿದೆ?
ಬೆಂಗಳೂರಿನ ಗಲಭೆ ಕುರಿತಂತೆ ಒಂದು ಜವಾಬ್ದಾರಿ ವಿರೋಧ ಪಕ್ಷದಂತೆ ನಡೆದುಕೊಳ್ಳಿ. ಅದನ್ನು ಬಿಟ್ಟು ‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಂತೆ’ ಕಾಂಗ್ರೆಸ್ ವರ್ತಿಸುತ್ತಿದೆ. ಅಮಾಯಕರನ್ನು ಬಿಟ್ಟುಬಿಡಿ, ಕೈ ಮುಖಂಡರನ್ನು ವಿಚಾರಣೆಗೆ ಕರೆಯುವುದು ತಪ್ಪು ಎಂಬ ನಿಮ್ಮ ನಡೆ ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದ ಸಂಬಂಧ ಕಾಂಗ್ರೆಸ್ ನಾಯಕರನ್ನು ಒಳಗೊಂಡ ಮುಸ್ಲಿಂ ಮುಖಂಡತ ನಿಯೋಗ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದರು. ಈ ವೇಳೆ ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಬೇಡಿ. ಈಗಾಗಲೇ ಬಂಧನವಾಗಿರುವ ಕೆಲ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದರು.

Comments

Leave a Reply

Your email address will not be published. Required fields are marked *