‘ಕಿರಿಕ್ ಪಾರ್ಟಿ’ ವರ್ಸಸ್ ಲಹರಿ ಆಡಿಯೋ ಸಂಸ್ಥೆ ಫೈಟ್ ಸುಖಾಂತ್ಯ

– ರಕ್ಷಿತ್ ಶೆಟ್ಟಿ, ಲಹರಿ ಮಧ್ಯೆ ಚಿಗುರಿದ ಸ್ನೇಹ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ, ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಒಂದಾಗಿದ್ದಾರೆ. ತಮ್ಮ ನಡುವಿನ ಎಲ್ಲ ಕಿರಿಕ್‍ಗಳನ್ನು ಬದಿಗಿಟ್ಟು ಸ್ನೇಹದ ಹಸ್ತ ಚಾಚಿದ್ದಾರೆ.

ಒಂದು ಘಟನೆ, ಹಲವು ದೃಷ್ಟಿಕೋನಗಳು. ದೃಷ್ಟಿಕೋನಗಳನ್ನು ಹಂಚಿಕೊಂಡು, ಅರ್ಥ ಮಾಡಿಕೊಂಡಾಗ ನಾವು ಮನುಷ್ಯರಾಗಿ ಒಗ್ಗೂಡುತ್ತೇವೆ. ಪ್ರೀತಿ ಮತ್ತು ಪರಸ್ಪರ ಗೌರವಗಳಲ್ಲಿ ಎಲ್ಲವೂ ಸೇರಿಕೊಳ್ಳಲೇಬೇಕು. ಅದೇ ಬೆಳವಣಿಗೆಯ ನಿಜವಾದ ಲಕ್ಷಣ ಎಂದು ರಕ್ಷಿತ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.

ಫೋಟೋ ನೋಡಿದ ಅನೇಕರು ಈ ಮೂವರಿಗೂ ಶುಭ ಹಾರೈಸಿದ್ದಾರೆ. ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ತಮ್ಮ ನಡುವಿನ ಕಿರಿಕ್ ಮರೆತು ಒಂದಾಗಿರುವ ಈ ಸೆಲೆಬ್ರಿಟಿಗಳನ್ನು ಕಂಡು ಸ್ಯಾಂಡಲ್‍ವುಡ್ ಮಂದಿ ಖುಷಿಪಟ್ಟಿದ್ದಾರೆ.

ನಡೆದಿದ್ದೇನು..?
ಕನ್ನಡ ಚಿತ್ರರಂಗದಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ಲಹರಿ ಮ್ಯೂಸಿಕ್ ಸಂಸ್ಥೆ ನಡುವೆ ಉಂಟಾಗಿದ್ದ ಕಿರಿಕ್ ಬಗ್ಗೆ ಎಲ್ಲರಿಗೂ ತಿಳಿದಿದೆ. ತಮ್ಮ ಸಂಸ್ಥೆಗೆ ಸೇರಿದ ಸಂಗೀತವನ್ನು ಕಿರಿಕ್ ಪಾರ್ಟಿ ಚಿತ್ರತಂಡ ಕೃತಿಚೌರ್ಯ ಮಾಡಿದೆ ಎಂದು ಆರೋಪಿಸಿ ಲಹರಿ ಸಂಸ್ಥೆಯ ವೇಲು ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆ ಬಗ್ಗೆ ಹಲವು ಬಾರಿ ವಿಚಾರಣೆ ನಡೆದಿತ್ತು. ಲಹರಿ ವೇಲು ಮತ್ತು ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿಯೇ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಂಡಿದ್ದರು.

ಕಿರಿಕ್ ಪಾರ್ಟಿ ಚಿತ್ರದ ಹೇ ಹೂ ಆರ್ ಯೂ ಹಾಡಿನಲ್ಲಿ ಶಾಂತಿ ಕ್ರಾಂತಿ ಚಿತ್ರದ ‘ಮಧ್ಯರಾತ್ರೀಲಿ’ ಹಾಡಿನ ಟ್ಯೂನ್ ಅನ್ನು ಬಳಸಿಕೊಳ್ಳಲಾಗಿತ್ತು. ನಮ್ಮ ಅನುಮತಿ ಇಲ್ಲದೇ ಹಾಡಿನ ಟ್ಯೂನ್ ಕದ್ದಿದ್ದಾರೆ ಅಂತ ಲಹರಿ ಸಂಸ್ಥೆ ಆರೋಪಿಸಿತ್ತು. ನಾವು ರವಿಚಂದ್ರನ್ ಅವರಿಗೆ ಟ್ರಿಬ್ಯೂಟ್ ಮಾಡಲು ಆ ರೀತಿ ಟ್ಯೂನ್ ಮಾಡಿದ್ವಿ ಅಂದಿದ್ದ ಕಿರಿಕ್ ಪಾರ್ಟಿ ಟೀಮ್ ಹೇಳಿಕೊಂಡಿತ್ತು. ಇದನ್ನೂ ಓದಿ:  ಸಂಚಾರಿ ವಿಜಯ್‍ಗೆ ಅಮೆರಿಕದ ಥಿಯೇಟರ್ ನಿಂದ ಗೌರವ

ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆ ಕೋರ್ಟ್ ನಿಂದ ಜಾಮೀನು ರಹಿತ ವಾರೆಂಟ್ ಜಾರಿ ಆಗಿತ್ತು. ವಾರಂಟ್ ಹಿನ್ನಲೆ 9ನೇ ಎಸಿಎಂಸಿ ಕೋರ್ಟ್ ಮುಂದೆ ಹಾಜರಾಗಿದ್ದ ರಕ್ಷಿತ್ ಶೆಟ್ಟಿ 10,000 ರೂಪಾಯಿ ಶ್ಯೂರಿಟಿ ನೀಡಿ ಜಾಮೀನು ಪಡೆದಿದ್ದರು. ‘ಕಿರಿಕ್ ಪಾರ್ಟಿ’ ವರ್ಸಸ್ ಲಹರಿ ಆಡಿಯೋ ಸಂಸ್ಥೆ ಫೈಟ್ ನಡೆಯುತ್ತಿತ್ತು. ಈ ವೇಳೆ ಕಾಪಿರೈಟ್ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಕಿರಿಕ್ ಪಾರ್ಟಿ ವಿವಾದವನ್ನು ಲಹರಿ ವೇಲು ಅವರ ಜೊತೆ ಕೂತು ರಕ್ಷಿತ್ ಶೆಟ್ಟಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *