ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

ಕೋಲಾರ: ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ, ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ 5 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಳೆದ ರಾತ್ರಿ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಬಾಳೆ ತೋಟಕ್ಕೂ ಬೆಂಕಿ ಆವರಿಸಿದ ಪರಿಣಾಮ 5 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗಾಹುತಿಯಾಗಿದೆ ಎಂದು ಶಂಕಿಸಲಾಗಿದೆ.

ಸಾಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಬೇಕಿತ್ತು, ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ ಎಂದು ರೈತ ಕನಸು ಕಂಡಿದ್ದ. ಆದರೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇದೀಗ ಕಂಗಾಲಾಗಿದ್ದಾರೆ. ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪಿಂಕ್ಲರ್ ಗಳು ಸಹ ಬೆಂಕಿಗಾಹುತಿಯಾಗಿವೆ.

ವಿಷಯ ತಿಳಿದ ಸ್ಥಳೀಯರು ಹಾಗೂ ಕೃಷ್ಣಪ್ಪ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 90 ಟನ್ ಇಳುವರಿ ನಷ್ಟವಾಗಿದೆ. ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *