ಕಿಚ್ಚನ ಅಭಿಮಾನಿಗಳಿಗೆ ‘ಫ್ಯಾಂಟಮ್’ ಚಿತ್ರತಂಡದಿಂದ ಗುಡ್ ನ್ಯೂಸ್

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕಿಚ್ಚ ಅಭಿನಯದ ಫ್ಯಾಂಟಮ್ ಚಿತ್ರದ ಶೂಟಿಂಗ್ ಮುಂದಿನ ತಿಂಗಳಿಂದ ಆರಂಭವಾಗಲಿದೆ.

ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೆ, ಸ್ಯಾಂಡಲ್‍ವುಡ್‍ನಲ್ಲಿ ಕೆಲ ಚಿತ್ರದ ಶೂಟಿಂಗ್ ಆರಂಭಗೊಂಡಿವೆ. ರಾಜ್ಯದಲ್ಲೂ ಕೂಡ ಒಳಾಂಗಣದಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಹೀಗಾಗಿ ಶೂಟಿಂಗ್ ಪ್ರಕ್ರಿಯೆಗಳು ಗರಿಗೆದರಿವೆ.

ಮುಂದಿನ ತಿಂಗಳು ಜುಲೈ 1ರಿಂದ ಸುದೀಪ್ ಅವರು ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಆರಂಭ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಜುಲೈನಿಂದ ಹೈದರಾಬಾದ್ ನಲ್ಲಿ ಚಿತ್ರದ ಚಿತ್ರೀಕರಣ ಮಾಡಲು ನಿರ್ಮಾಪಕ ಜಾಕ್ ಮಂಜು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಜೂನ್ 16ರಿಂದ ಹೈದರಾಬಾದ್‍ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗುತ್ತದೆ. ಸ್ಟುಡಿಯೋದ ಎರಡು ಫ್ಲೋರ್ ನಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೊನಾ ಇನ್ನೂ ಕಮ್ಮಿ ಆಗದ ಕಾರಣ ಬಹಳ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗುತ್ತದೆ. ಈ ಮೂಲಕ ಕಲಾವಿದರು ಮತ್ತು ತಂತ್ರಜ್ಞರಿಗೆ ಬೇಕಾದ ಎಲ್ಲ ಮುನ್ನೆಚರಿಕಾ ಕ್ರಮ ಹಾಗೂ ಶೂಟಿಂಗ್ ಮಾಡಲು ಇರುವ ನಿಯಮವನ್ನ ಪಾಲಿಸಲು ಚಿತ್ರತಂಡ ಸಜ್ಜಾಗಿದೆ. ಸ್ವತಃ ಸುದೀಪ್ ಅವರೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ಸಿನಿಮಾ ಶೂಟಿಂಗ್ ಮಾಡಲು ಧೈರ್ಯ ನೀಡಿದ್ದಾರೆ.

ಮುಂದಿನ ತಿಂಗಳು ಚಿತ್ರತಂಡ ಹೈದರಾಬಾದ್‍ಗೆ ಹೋಗುತ್ತಿದೆ. ಜೊತೆಗೆ ಚಿತ್ರೀಕರಣದಲ್ಲಿ ಭಾಗವಹಿಸುವವರು ಶೂಟಿಂಗ್ ಮುಗಿಯುವ ತನಕ ಶೂಟಿಂಗ್ ಸೆಟ್ ಬಿಟ್ಟು ಹೋಗುವಂತಿಲ್ಲ. ಶೂಟಿಂಗ್ ತೆರಳಿದವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕೂಡ ಮಾಡಲಾಗಿದೆ. ಚಿತ್ರೀಕರಣ ಮುಗಿಯುವವರೆಗೂ 80 ಜನರನ್ನು ಶೂಟಿಂಗ್ ಕ್ವಾರಂಟೈನ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.

ಪಕ್ಕದ ರಾಜ್ಯದಲ್ಲಿ ಶೂಟಿಂಗ್‍ಗೆ ಅನುಮತಿ ಸಿಕ್ಕ ನಂತರ, ಇತರೆ ಚಿತ್ರತಂಡಗಳು ಕೂಡ ಚಿತ್ರೀಕರಣಕ್ಕೆ ಆಂಧ್ರ ಹಾಗೂ ತೆಲಂಗಾಣಕ್ಕೆ ಹೊರಡಲಿವೆ. ಕೆ.ಜಿ.ಎಫ್-2 ಹಾಗೂ ಪೊಗರು ಚಿತ್ರತಂಡದಿಂದ ಹೈದರಾಬಾದ್‍ನಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಈ ಚಿತ್ರತಂಡಗಳು ಕೂಡ ಮತ್ತೆ ಹೈದರಾಬಾದ್‍ಗೆ ತೆರಳುವ ಸಾಧ್ಯತೆ ಇದೆ. ಚಿತ್ರೀಕರಣದ ಕೊನೆಯ ಹಂತದಲ್ಲಿ ಒಂದೆರಡು ಸಾಂಗ್ ಬಾಕಿ ಉಳಿಸಿಕೊಂಡಿರುವ ಚಿತ್ರತಂಡಗಳು ಹೈದರಾಬಾದ್‍ಗೆ ತೆರಳಲಿವೆ.

ಫ್ಯಾಂಟಮ್ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನದ ಮಾಡುತ್ತಿದ್ದು, ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.

Comments

Leave a Reply

Your email address will not be published. Required fields are marked *