ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ನು ಮುಂದೆ ಪಂಜಾಬ್ ಕಿಂಗ್ಸ್

ಚಂಡೀಗಡ: 14ನೇ ಆವೃತ್ತಿಯ ಐಪಿಎಲ್‍ಗೆ ಭರ್ಜರಿ ಎಂಟ್ರಿ ಕೊಡಲು ಕಾಯುತ್ತಿರುವ ಕಿಂಗ್ಸ್ ಇಲೆವನ್ ಪಂಜಾಬ್ ತನ್ನ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದೆ.

ಪ್ರೀತಿ ಝಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ 14ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಈ ಕುರಿತು ಅಧಿಕೃತವಾಗಿ ಮಾತನಾಡಿರುವ ತಂಡದ ಸಿಇಒ ಸಂತೋಷ್ ಮೆನನ್, ಪಂಜಾಬ್ ಕಿಂಗ್ ಹೊಸತನದಲ್ಲಿ ರೂಪುಗೊಂಡಿರುವ ಬ್ರ್ಯಾಂಡ್ ಹೆಸರಾಗಿದ್ದು, ಇದು ನಮ್ಮ ಹೊಸ ಕೋರ್ ಬ್ರ್ಯಾಂಡ್ ಹೆಸರಿಸಲು ಸೂಕ್ತವಾದ ಸಮಯವಾಗಿದೆ ಎಂದಿದ್ದಾರೆ.

ಈವರೆಗಿನ 13 ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ ಒಮ್ಮೆಯೂ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಪಡೆದುಕೊಂಡಿಲ್ಲ. ಒಂದು ಬಾರಿ ರನ್ನರ್ ಅಪ್ ಹಾಗೂ ಇನ್ನೊಂದು ಬಾರಿ ಮೂರನೇ ಸ್ಥಾನ ಪಡೆದದನ್ನು ಬಿಟ್ಟರೆ ಇನ್ನುಳಿದ ಬಹುತೇಕ ಎಲ್ಲಾ ಆವೃತ್ತಿಗಳಲ್ಲಿ ನೀರಸ ಪ್ರದರ್ಶನದ ಮೂಲಕ ಪಂಜಾಬ್ ತಂಡ ನಿರಾಸೆ ಅನುಭವಿಸಿದೆ.

ದುಬೈನಲ್ಲಿ ನಡೆದ 13ನೇ ಆವೃತ್ತಿಯಲ್ಲಿ ಘಟಾನುಘಟಿ ಆಟಗಾರರೊಂದಿಗೆ ಮೈದಾನಕ್ಕಿಳಿದಿದ್ದರೂ ಅದೃಷ್ಟ ಕೈಹಿಡಿದಿರಲಿಲ್ಲ. ಈ ಬಾರಿಯೂ ಬಲಿಷ್ಟ ಆಟಗಾರರಾದ ಕೆ.ಎಲ್ ರಾಹುಲ್, ಮಾಯಾಂಕ್ ಅರ್ಗವಾಲ್, ಕ್ರೀಸ್ ಗೇಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ದೀಪಕ್ ಹೂಡಾ ಜೊತೆಗೆ ಕೋಚ್ ಆಗಿ ಕನ್ನಡಿಗರಾದ ಅನಿಲ್ ಕುಂಬ್ಳೆ ತಂಡದಲ್ಲಿರುವುದು ಬಲ ಹೆಚ್ಚಿಸಿದ್ದು, ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ಹೆಸರನ್ನು ಪಂಜಾಬ್ ಕಿಂಗ್ಸ್ ಆಗಿ ಬದಲಾಯಿಸಿದ ಬಳಿಕವಾದರೂ ತಂಡದ ಅದೃಷ್ಟ ಬದಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *