‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

ಮುಂಬೈ: ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿರಿಕಾರಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹೇಳಿಕೆಗಳಿಗೆ ಶಿಖರ್ ಧವನ್ ಟಾಂಗ್ ನೀಡಿದ್ದು, ಎಂದಿಗು ಕಾಶ್ಮೀರ ನಮ್ಮದೇ ಎಂದು ಹೇಳಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಬಳಿಕ ಅಫ್ರಿದಿ ವಿರುದ್ಧ ಧವನ್ ಕಿಡಿಕಾರಿದ್ದಾರೆ.

ಕೊರೊನಾದಿಂದ ಪಾಕಿಸ್ತಾನದಲ್ಲಿ ಸಮಸ್ಯೆಗೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಅಫ್ರಿದಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಅಫ್ರಿದಿ, ಪಾಕಿಸ್ತಾನದ ಸೈನದ ಬಲದಷ್ಟು ಸೈನಿಕರನ್ನು ಪ್ರಧಾನಿ ಮೋದಿ ಕಾಶ್ಮೀರದಲ್ಲಿ ನಿಯೋಜಿಸಿದ್ದಾರೆ. ಆತನ ಮನಸ್ಸಿನಲ್ಲಿ ಕೊರೊನಾಗೂ ಹೆಚ್ಚಿನ ರೋಗ ಇದೇ ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರೊಂದಿಗೆ ಭಾರತದಲ್ಲಿ ಅಫ್ರಿದಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಇತ್ತ ಅಫ್ರಿದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಧವನ್, ಇಡೀ ಜಗತ್ತು ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಕಾಶ್ಮೀರ ಸಮಸ್ಯೆಯನ್ನ ಎಳೆದು ತಂದಿರುವುದಕ್ಕೆ ನಾಚಿಕೆಯಾಗಬೇಕು. ಕಾಶ್ಮೀರ ಒಂದು ಕಾಲದಲ್ಲಿ ನಮ್ಮದಾಗಿತ್ತು. ಇಂದು ಕೂಡ ನಮ್ಮದೇ. ಮುಂದಿನ ದಿನಗಳಲ್ಲೂ ನಮ್ಮದೇ ಆಗಿರುತ್ತದೆ. 22 ಕೋಟಿ ಸೈನಿಕರನ್ನು ಕರೆತಂದರೂ ನಮ್ಮ ಒಬ್ಬ ಸೈನಿಕ ಲಕ್ಷ ಮಂದಿಗೆ ಸಮಾನ. ಉಳಿದ ಲೆಕ್ಕವನ್ನು ನೀವೇ ಮಾಡಿಕೊಳ್ಳಿ ಎಂದು ಧವನ್ ಟ್ವೀಟ್‍ನಲ್ಲಿ ಅಫ್ರಿದಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದಾರೆ.

ಕೊರೊನಾ ವಿರುದ್ಧದ ಹೋರಾಟ ಗಡಿಗಳು ಮತ್ತು ಧರ್ಮ, ಜಾತಿಗಳನ್ನು ಮೀರಿ ಮಾಡಬೇಕು ಎಂದು ನಮ್ಮ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಹಾಗಾಗಿ ನಾವು ಮಾಡುತ್ತಿರುವ ಮನವಿ ಬಗ್ಗೆ ತುಂಬ ಸ್ಪಷ್ಟತೆ ಇತ್ತು. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಸಹಾಯ ಆಗಲಿ ಎಂದು ನಾವು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಆತ ನಮ್ಮ ದೇಶದ ವಿರುದ್ಧವೇ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಆತ ನಮ್ಮ ಸಹಾಯ ಕೇಳಿದ ತಕ್ಷಣ ಯಾವುದನ್ನು ಆಲೋಚಿಸದೆ ಸಹಾಯ ಮಾಡಿದ್ದೆವು. ಆದರೆ ಈಗ ಹೇಳುತ್ತಿದ್ದೇವೆ. ಆತನೊಂದಿಗೆ ಯಾವುದೇ ಬಾಂಧವ್ಯವಿಲ್ಲ. ನಮ್ಮ ದೇಶದ ವಿರುದ್ಧ ಮಾತನಾಡುವ ಹಕ್ಕು ಆತನಿಗೆ ಇಲ್ಲ ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇತ್ತ ಅಫ್ರಿದಿ ಹೇಳಿಕೆ ವೈರಲ್ ಆಗುತ್ತಿದಂತೆ ಆತನಿಗೆ ಮೊದಲು ಸಹಾಯ ಮಾಡುವಂತೆ ಮನವಿ ಮಾಡಿದ್ದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *