ಕಾಲ್ ಗರ್ಲ್, ಗಂಟೆಗೆ 3 ಸಾವಿರ- ಪತ್ನಿಯ ಖಾಸಗಿ ಫೋಟೋದೊಂದಿಗೆ ಪೋಸ್ಟ್ ಹರಿಬಿಟ್ಟ ಪತಿ

ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗಿದ್ದ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕೆಯನ್ನು ಕಾಲ್ ಗರ್ಲ್ ಎಂದು ಬಿಂಬಿಸಿದ್ದಾನೆ.

ಪತಿಮಹಾಶಯ ತನ್ನ ಹೆಂಡತಿಗೆ ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೆಸತ್ತು ಪತ್ನಿ ಮನೆ ಬಿಟ್ಟು ತವರು ಮನೆಗೆ ಬಂದಿದ್ದಳು. ಇದೀಗ ಪತ್ನಿಯು ಈ ರೀತಿ ದುವರ್ತನೆ ತೋರಿದ ಪತಿಯ ವಿರುದ್ಧ ಕುಟುಂಬಸ್ಥರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದಾಳೆ.

ಆರೋಪಿ ತಿರುಪತಿಯ ಎಸ್‍ಜಿಎಸ್ ಕಾಲೇಜಿನಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಆಗಸ್ಟ್‍ನಲ್ಲಿ ಮಹಿಳೆಯನ್ನು ಮದುವೆಯಾಗಿದ್ದ ಆರೋಪಿ, ಮದುವೆಯಾದ ಮೂರನೇ ದಿನದಿಂದ ಆಕೆಗೆ ಕಿರುಕುಳ ನೀಡುತ್ತಿದ್ದನು ಎಂದು ದೂರಿದ್ದಾಳೆ.

ಈ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದನು, ಕೊಡಲು ನಿರಾಕರಿಸಿದ ಕಾರಣ ಹಲ್ಲೆ ಮಾಡುತ್ತಿದ್ದನು. ಮದುವೆಯಾದ ನಂತರ ಗರ್ಭಿಣಿಯಾಗಿದ್ದ ಪತ್ನಿಗೆ ಹಲ್ಲೆ ನಡೆಸಿದ್ದರ ಪರಿಣಾಮ ಗರ್ಭಪಾತವಾಗಿತ್ತು. ಆರೋಪಿ ನಂತರ ಹೆಚ್ಚಿನ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದಾಗ ಮಹಿಳೆ ಕಿರುಕುಳವನ್ನು ಸಹಿಸಲಾಗದೆ ತನ್ನ ತವರು ಮನೆ ಬೆಂಗಳೂರಿಗೆ ಮರಳಿದ್ದಳು. ತವರು ಮನೆಗೆ ಹೋಗಿದ್ದಾಗ ಆಕೆಯ 20 ಲಕ್ಷ ರೂ ಬೆಲೆಬಾಳುವ ಚಿನ್ನ ಮತ್ತು ನಗದನ್ನು ಕದ್ದಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಕೆಲದಿನಗಳ ನಂತರ ತಮ್ಮ ಖಾಸಗಿ ಫೋಟೋಗಳನ್ನು ಕಾಲೇಜು ವಾಟ್ಸಾಪ್ ಗ್ರೂಪ್‍ಗೆ ಪೋಸ್ಟ್ ಮಾಡಿ, ಕಾಲ್ ಗರ್ಲ್ ಎಂದು ಅಡಿಬರಹ ಕೊಟ್ಟು ಗಂಟೆಗೆ 3,000 ಸಾವಿರ ರೂ. ಈ ಮಹಿಳೆಗೆಂದು ಬರೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಈತನ ಉಪಟಳವನ್ನು ಸಹಿಸಲಾಗದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಸಂಬಂಧಿತ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *