ಕಾಲಿವುಡ್‍ಗೆ ಬಹದ್ಧೂರ್ ಹುಡುಗನ ಅದ್ಧೂರಿ ಎಂಟ್ರಿ

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಕಿಕ್ಕೇರಿಸುತ್ತಿದ್ದು, ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಚಿತ್ರ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಇದೇ ಸಂದರ್ಭದಲ್ಲಿ ಧೃವಾ ಸರ್ಜಾ ತಮಿಳಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿದೆ.

ಅರೇ ಇದೇನಪ್ಪಾ ಇದ್ದಕ್ಕಿದ್ದಂತೆ ಧೃವ ಸರ್ಜಾ ತಮಿಳು ಇಂಡಸ್ಟ್ರಿಗೆ ಕಾಲಿಟ್ರಾ, ಯಾವ ಸಿನಿಮಾ ಎಂದು ಯೋಚಿಸಬೇಡಿ. ಸ್ಯಾಂಡಲ್‍ವುಡ್‍ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಪೊಗರು ಸಿನಿಮಾ ತಮಿಳಿಗೆ ಡಬ್ ಆಗುತ್ತಿದೆ. ಈ ಮೂಲಕ ತಮಿಳಿನಲ್ಲೂ ಧೃವ ಸರ್ಜಾ ಘರ್ಜಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿರುವ ಧೃವ, ತಮಿಳು ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ.

ತಮಿಳಿನಲ್ಲಿ ಸೆಮ್ಮಾ ತಿಮಿರು ಎಂದು ಟೈಟಲ್ ಇಡಲಾಗಿದ್ದು, ಇದರಿಂದ ಅಭಿಮಾನಿಗಳ ಖುಷಿ ಇಮ್ಮಡಿಯಾಗಿದೆ. ಈಗಾಗಲೇ ತೆಲುಗಿಗೆ ಡಬ್ ಆಗುತ್ತಿದ್ದು, ಹಿಂದಿ ಡಬ್ಬಿಂಗ್ ಹಕ್ಕುಗಳು ಸಹ 7.2 ಕೋಟಿ.ರೂ.ಗೆ ಮಾರಾಟ ಆಗಿವೆ. ಹೀಗಾಗಿ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದೇ ಹೇಳಬಹುದು. ಇದರಿಂದಾಗಿ ಧೃವ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಇಷ್ಟೊತ್ತಿಗೆ ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಹಿನ್ನೆಲೆ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಬಿಡುಗಡೆ ತಡವಾಗಿದೆ. ನಂದಕಿಶೋರ್ ನಿರ್ದೇಶನ ಸಿನಿಮಾಗಿದ್ದು, ಧೃವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು, ತಮಿಳು ಬಳಿಕ ಇದೀಗ ಬಾಲಿವುಡ್‍ಗೂ ಕಾಲಿಟ್ಟಿದ್ದಾರೆ. ಹೀಗಾಗಿ ಸಿನಿಮಾ ಯಶಸ್ಸು ಕಾಣಲಿದೆ ಎಂಬುದು ಸಿನಿಮಾ ತಂಡದ ವಿಶ್ವಾಸ ಹೀಗಾಗಿ ತಮಿಳು, ತೆಲುಗಿನಲ್ಲೂ ಸಿನಿಮಾ ಡಬ್ ಮಾಡಲಾಗುತ್ತಿದೆ.

ಹಾಡುಗಳ ಮೂಲಕ ಸಖತ್ ಸದ್ದು ಮಾಡಿರುವ ಪೊಗರು ಸಿನಿಮಾ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಸಿನಿಮಾದ ಕರಾಬು ಹಾಡು ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಚಿತ್ರಕ್ಕಾಗಿ ಧೃವ ಸರ್ಜಾ ಸಹ ಭಾರೀ ವರ್ಕೌಟ್ ಮಾಡಿದ್ದು, ಚಿತ್ರ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *