ಕಾರಿನ ಜೊತೆ ಹುಡುಗರು ಎಸ್ಕೇಪ್- ಎದ್ದು ಬಿದ್ದು ಓಡಿದ ಮ್ಯಾನೇಜರ್

ಉಡುಪಿ: ರಾಜ್ಯಾದ್ಯಂತ ಕೊರೊನಾ ಲಾಕ್ ಡೌನ್ ತೆರವಾಗುತ್ತಿದ್ದಂತೆ ಜನ ಓಡಾಟ ಆರಂಭಿಸಿದ್ದಾರೆ. ಸರ್ಕಾರದ ನಿಯಮಾವಳಿಗಳನ್ನು ಮರೆಯುತ್ತಿದ್ದಾರೆ. ಉಡುಪಿ ಡಿಸಿ ಜಿ. ಜಗದೀಶ್ ಸಿಡಿ ದಾಳಿಗೆ ಮಾಲ್ ಮ್ಯಾನೇಜರ್, ಯುವಕರ ಬೆವರಿಳಿದಿದೆ.

ಉಡುಪಿ ಜಿಲ್ಲೆಯಲ್ಲೂ ಗಡಿ ಸಿಲ್ ಆದೇಶವನ್ನು ವಾಪಸ್ ಪಡೆಯಲಾಗಿದೆ. ಈ ನಡುವೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನಗರದ ಆಯಕಟ್ಟಿನ ಸ್ಥಳಗಳಿಗೆ ದಾಳಿ ಮಾಡಿದರು. ಸರ್ವಿಸ್ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿಗಳು ಎಂಟರ್ ಆಗುತ್ತಿದ್ದಂತೆ ಯುವಕರ ಗುಂಪೊಂದು ಎಸ್ಕೇಪಾಗಿದೆ. ಡಿಸಿ ಮತ್ತು ಅಧಿಕಾರಿಗಳನ್ನು ಕಂಡು ಕ್ಷಣದಲ್ಲಿ ಯುವಕರು ಕಣ್ಮರೆಯಾಗಿದ್ದಾರೆ. ಪಲಾಯನಗೈದ ದೃಶ್ಯ ಮೊಬೈಲ್, ಕ್ಯಾಮೆರಾಗಳಲ್ಲೂ ಸೆರೆಯಾಗಿದೆ. ಮಾಸ್ಕ್ ಧರಿಸದೆ ಇರುವುದು ಮಾತ್ರವಲ್ಲ ಗಾಂಜಾ ಸೇವನೆಯಂತಹ ಕಾನೂನುಬಾಹಿರ ಕೃತ್ಯದಲ್ಲಿ ಯುವಕರ ತಂಡ ತೊಡಗಿತ್ತು ಎಂದು ಸಂಶಯಿಸಲಾಗಿದೆ.

ಎಸ್ಕೇಪಾದ ಯುವಕರ ತಂಡವನ್ನು ಪತ್ತೆ ಮಾಡುವಂತೆ ಜಿಲ್ಲಾಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅನಿರೀಕ್ಷಿತ ದಾಳಿಯಿಂದ ಕಾರು ಚಾಲಕರು, ಅಂಗಡಿ- ಹೋಟೆಲ್ ಮಾಲಕರು, ಸಾರ್ವಜನಿಕರು ದಂಗಾದರು. ಸೂಕ್ತ ನಿಯಮ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹಿರಿಯ ನಾಗರೀಕರಿಗೆ ಡಿಸಿ ಸಲಹೆ ನೀಡಿದರು.

ಮಾಲ್ ಒಂದಕ್ಕೆ ದಾಳಿ ನಡೆಸಿದ ವೇಳೆ ಅಲ್ಲಿನ ಮ್ಯಾನೇಜರ್ ಗಾಬರಿಯಿಂದ ಎದ್ದು ಬಿದ್ದು ಓಡಿದ ದೃಶ್ಯ ಕಂಡುಬಂತು. ಡಿಸಿ ಬಂದ್ರೂ.. ಡಿಸಿ ಬಂದ್ರು ಅಂತ ಗ್ರಾಹಕರು ಹಾಗೂ ಸಿಬಂದಿಯನ್ನು ಎಚ್ಚರಿಸುವ ದೃಶ್ಯ ಕೂಡ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಡಿಸಿ ನಗರಭಾಗದಲ್ಲಿ ದಾಳಿ ನಡೆಸಿ ಜನಜಾಗೃತಿ ಮೂಡಿಸಿದರು.

ಬಟ್ಟೆಯಂಗಡಿ, ಮೆಡಿಕಲ್, ಮೊಬೈಲ್ ಶಾಪ್ ಹೀಗೆ ಬೇರೆ ಬೇರೆ ವ್ಯಾಪಾರ ಕೇಂದ್ರಗಳಿಗೆ ನಗರಸಭೆ ಅಧಿಕಾರಿಗಳು ಭೇಟಿಕೊಟ್ಟು ಜಾಗೃತಿ ಮೂಡಿಸಿದರು. ಮಾಧ್ಯಮಗಳ ಜೊತೆ ಮಾತಾಡಿದ ಡಿಸಿ, ಆರೋಗ್ಯ ಜನರ ಕೈಯ್ಯಲ್ಲಿದೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಬಳಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

Comments

Leave a Reply

Your email address will not be published. Required fields are marked *