ಕಾರಲ್ಲಿ ಕೂತ್ಕೊಂಡೇ ಕೋವಿಡ್ ಲಸಿಕೆ ಹಾಕಿಸ್ಕೊಳ್ಳಿ..!

– ಬೆಂಗಳೂರಿಗೂ ಬಂತು ಡ್ರೈವ್ ಥ್ರೂ ವ್ಯಾಕ್ಸಿನೇಷನ್

– ಪವಿತ್ರ ಕಡ್ತಲ

ಬೆಂಗಳೂರು: ಗುಂಪಿನ ಮಧ್ಯೆ ಹೋಗಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಲ್ಲ ಎಂದು ಚಿಂತೆಯಲ್ಲಿರುವ ಸಿಲಿಕಾನ್ ಸಿಟಿ ಜನತೆಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮುಂಬೈ, ದೆಹಲಿ ಮಾದರಿಯಲ್ಲಿ ನಗರಕ್ಕೂ ಈಗ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಬಂದಿದೆ. ಇದರಿಂದಾಗಿ ನೀವು ಕಾರಲ್ಲೇ ಕೂತು ವ್ಯಾಕ್ಸಿನ್ ಪಡೆದುಕೊಳ್ಳಬಹುದು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ವೇಗಾ ಸಿಟಿ ಮಾಲ್‍ನಲ್ಲಿ ಜೂನ್ 17ರ ವರೆಗೆ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಅಭಿಯಾನ ನಡೆಯಲಿದೆ. ಬೆಂಗಳೂರಿನ ಎರಡು ಖಾಸಗಿ ಆಸ್ಪತ್ರೆಗಳು ಹಾಗೂ ವೇಗಾ ಮಾಲ್ ಸಹಯೋಗದಲ್ಲಿ ಈ ಅಭಿಯಾನ ನಡೆಯುತ್ತಿದೆ.

ಕೋವಿನ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು ಸಹ ಈ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಪಡೆದುಕೊಳ್ಳಬಹುದು. ವಾಕ್ ಇನ್ ಬಂದವರಿಗೆ ವ್ಯಾಕ್ಸಿನ್ ಸಿಗೋದು ಕೊಂಚ ತಡವಾಗಬಹುದು. ಸದ್ಯ ಈ ಹೊಸ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಇದನ್ನೂ ಓದಿ: ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ- ಮೈಸೂರಲ್ಲಿ 30 ಚಿಣ್ಣರರಿಗೆ ಕೋವ್ಯಾಕ್ಸಿನ್

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವ್ಯಾಕ್ಸಿನ್ ಹಾಕಿಸಿಕೊಂಡವರು, ಡ್ರೈವ್ ಥ್ರೂ ವ್ಯಾಕ್ಸಿನೇಷನ್‍ನಿಂದ ನಮಗೆ ಖುಷಿಯಾಗಿದೆ, ತುಂಬಾ ಸುಲಭವಾದಿದೆ. ಎಲ್ಲ ಕಡೆ ತುಂಬಾ ಜನ ಇರುತ್ತಾರೆ. ಇದರಿಂದಾಗಿ ಸರತಿ ನೋಡಿ ಭಯಾನೂ ಇತ್ತು. ಆದರೆ ಇದರಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು. ಕಾರಲ್ಲಿಯೇ ಬಂದು ಕಾರಲ್ಲಿ ಕೂತು ವ್ಯಾಕ್ಸಿನ್ ಹಾಕಿಸಿಕೊಂಡು, ಕೆಲವು ಫಲಾನುಭವಿಗಳು ಖುಷಿಪಟ್ಟು, ನರ್ಸ್‍ಗಳಿಗೆ ಕೈ ಮುಗಿದ ಘಟನೆಯೂ ಇಂದು ನಡೆಯಿತು. ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಪುಸ್ತಕ ನೀಡಿ ಆತ್ಮಸ್ಥೈರ್ಯ ತುಂಬಿದ ಲ್ಯಾಬ್ ಟೆಕ್ನಿಷಿಯನ್

ಈ ಬಗ್ಗೆ ಮಾತನಾಡಿದ ವೇಗಾ ಸಿಟಿ ಮಾಲ್ ನಿರ್ದೇಶಕ ಸಚಿನ್ ರಾಜು, ನಿನ್ನೆಯಿಂದ ನಾವು ಈ ಅಭಿಯಾನ ಶುರು ಮಾಡಿದ್ದೇವೆ. ನಿನ್ನೆ ಸುಮಾರು 200ಕ್ಕೂ ಹೆಚ್ಚು ಜನ ನೋಂದಣಿ ಮಾಡಿದ್ದರು. ಇದರಲ್ಲಿ 156 ಮಂದಿ ಬಂದು ಲಸಿಕೆ ಹಾಕಿಸಿಕೊಂಡರು. ಇವತ್ತು 300 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

ಏನಿದು ಡ್ರೈವ್ ಥ್ರೂ ವ್ಯಾಕ್ಸಿನೇಷನ್?
ಬೆಂಗಳೂರಿನಲ್ಲಿ ಈ ಯೋಜನೆ ಶುರು ಮಾಡಿದ್ದು ನಾವೇ, ಇಂಥಹ ಕಾನ್ಸೆಪ್ಟ್ ಮುಂಬೈ ಹಾಗೂ ದೆಹಲಿಯ ಮಾಲ್‍ಗಳಲ್ಲಿ ಶುರುವಾಗಿತ್ತು. ಅಲ್ಲಿ ಅವರು ಜಾರಿಗೊಳಿಸಿದ ಮಾರ್ಗಸೂಚಿಗಳನ್ನೇ ನಾವು ಇಲ್ಲಿ ಅನುಸರಿಸುತ್ತಿದ್ದೇವೆ. ಆಸ್ಟರ್ ಹಾಸ್ಪಿಟಲ್ ಹಾಗೂ ವಾಸವಿ ಆಸ್ಪತ್ರೆಯ ಸಹಕಾರದಿಂದ ಲಸಿಕೆ ಹಾಕುವ ಅಭಿಯಾನ ಶುರು ಮಾಡಿದ್ದೇವೆ. ಇದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಹ ಸಹಕಾರ ನೀಡಿದ್ದಾರೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳಿಂದಲೂ ನಾವು ಅನುಮತಿ ಪಡೆದಿದ್ದೇವೆ ಎಂದರು.

ಲಸಿಕೆ ಬೇಕಾದರೆ ನೀವೇನು ಮಾಡಬೇಕು?
ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾಗಿರಲೇ ಬೇಕು. ವೇಗಾ ಸಿಟಿ ಮಾಲ್‍ಗೆ ಬಂದರೆ ನೀವು 3 ಹಂತದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಮೊದಲ ಹಂತದಲ್ಲಿ ಜನರು ತಮ್ಮ ಮಾಹಿತಿಯನ್ನು ನೀಡಬೇಕು ಹಾಗೂ ಆಧಾರ್ ಕಾರ್ಡ್ ಇತ್ಯಾದಿ ಅಗತ್ಯ ವಿವರಗಳನ್ನು ನೀಡಬೇಕು. ಎರಡನೇ ಹಂತದಲ್ಲಿ ಲಸಿಕೆ ಹಾಕುತ್ತಾರೆ. ಮೂರನೇ ಹಾಗೂ ಕೊನೆಯ ಹಂತದಲ್ಲಿ ನೀವು ಬಂದಿರುವ ಕಾರ್‍ಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಹಾಕಿದ ನಂತರ ನಿಮಗೆ ನಿಗದಿಪಡಿಸಿದ ಪಾರ್ಕಿಂಗ್ ಲಾಟ್‍ನಲ್ಲಿ ನಿಲ್ಲಿಸಿದ್ದ ಕಾರ್‍ನಲ್ಲಿ ಅರ್ಧ ಗಂಟೆ ಅವಧಿಯ ವಿಶ್ರಾಂತಿ ಪಡೆದುಕೊಳ್ಳಬೇಕು. ಈ ಅವಧಿಯಲ್ಲಿ ಯಾವುದೇ ಅಡ್ಡಪರಿಣಾಮ ಕಾಣಿಸದಿದ್ದಲ್ಲಿ, ಮರಳಿ ಮನೆಗೆ ತೆರಳಬಹುದು. ಒಂದು ವೇಳೆ ಅಡ್ಡ ಪರಿಣಾಮ ಕಾಣಿಸಿದರೆ ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಅಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿದ್ದೇವೆ ಎಂದು ಸಚಿನ್ ರಾಜು ಹೇಳಿದರು.

ಇನ್ನೂ ನಾಲ್ಕೈದು ದಿನ ಈ ವ್ಯಾಕ್ಸಿನೇಷನ್ ಡ್ರೈವ್ ನಡೆಯಲಿದೆ. ಬಳಿಕ ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ ಲಭಿಸಿದರೆ ನಿತ್ಯ ಈ ಕಾರ್ಯಕ್ರಮ ಮುಂದುವರಿಸುವುದಾಗಿ ಸಚಿನ್ ರಾಜು ಹೇಳಿದರು.

18 ವರ್ಷ ಮೇಲ್ಪಟ್ಟವರಿಗೆ ಸಹ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ನೀಡಲಾಗುತ್ತಿದೆ. ಬೇರೆ ರಾಜ್ಯದಲ್ಲಿ ಫೇಮಸ್ ಆಗಿದ್ದ ಈ ಡ್ರೈವ್ ಈಗ ಬೆಂಗಳೂರಿನಲ್ಲಿಯೂ ಹವಾ ಎಬ್ಬಿಸಿದೆ.

Comments

Leave a Reply

Your email address will not be published. Required fields are marked *