ಕಾಯಂ ರುದ್ರಭೂಮಿಗಾಗಿ ಗ್ರಾಮಸ್ಥರ ಪ್ರತಿಭಟನೆ

ಧಾರವಾಡ: ತಾಲೂಕಿನ ಲಕಮಾಪುರ ಗ್ರಾಮಸ್ಥರಿಗೆ ಕಾಯಂ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಲಕಮಾಪುರ ಗ್ರಾಮದ ಅಲ್ಪಸಂಖ್ಯಾತರು, ಕುರುಬರು, ಉಪ್ಪಾರರು, ವಿಶ್ವಕರ್ಮರು, ಹಡಪದ ಜನಾಂಗದವರು ಹಾಗೂ ಮರಾಠಾ ಸಮುದಾಯದ ಜನ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ವಾದ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ ಬಂದ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತು ಬೊಬ್ಬೆ ಹೊಡೆದು ಪ್ರತಿಭಟನೆ ನಡೆಸಿದರು.

ಲಕಮಾಪುರ ಗ್ರಾಮದ ಸರ್ವೆ ನಂಬರ್ 5 ರಲ್ಲಿ ಅನಾದಿ ಕಾಲದಿಂದಲೂ ಶವ ಸಂಸ್ಕಾರ ಮಾಡುತ್ತ ಬರಲಾಗಿದೆ.  ಈ ಜಾಗವನ್ನು ವಿಜಯಲಕ್ಷ್ಮೀ ತಾನಾಜಿ ಪಾಟೀಲ ಎನ್ನುವವರು ಪರಬಾರೆ ಮಾಡಲು ತಯಾರಿ ನಡೆಸಿದ್ದು, ಗಮನಕ್ಕೆ ಬಂದಿದೆ. ಹೀಗೆ ಪರಬಾರೆ ಮಾಡಿದರೆ, ನಮ್ಮ ಸಮುದಾಯದ ಜನರು ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಅಡ್ಡಿಪಡಿಸಬಹುದು. ಹೀಗಾಗಿ ವಿಜಯಲಕ್ಷ್ಮೀ ಅವರಿಗೆ ಈ ಜಮೀನು ಪರಬಾರೆ ಮಾಡಲು ಅನುಮತಿ ನೀಡಬಾರದು. ಒಂದು ವೇಳೆ ಅವರಿಗೆ ಅನುಮತಿ ನೀಡಿದ್ದೇ ಆದಲ್ಲಿ ನಾವುಗಳು ರಸ್ತೆ ಬದಿ ಶವ ಸಂಸ್ಕಾರ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

15 ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಲಕಮಾಪುರ ಗ್ರಾಮಕ್ಕೆ ಕಾಯಂ ರುದ್ರಭೂಮಿ ನೀಡಲು 1994 ರಿಂದ ಮನವಿ ನೀಡುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಸಂಬಂಧ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದರೆ ಡಿಸಿ ಕಚೇರಿ ಎದುರೇ ಅನಿರ್ಧಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *