ಚಿಕ್ಕಮಗಳೂರು: ಜಿಲ್ಲಾದ್ಯಂತ ಮಳೆರಾಯ ತಂಪೆರೆದಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಮಳೆ ಸುರಿದಿದೆ.
ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜಿಲ್ಲೆಯ ಜನಕ್ಕೆ ಮಳೆರಾಯ ತಂಪೆರೆದಿದ್ದಾನೆ. ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ, ಶೃಂಗೇರಿ, ತರೀಕೆರೆ ಹಾಗೂ ಕಡೂರಿನ ಕೆಲ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಮೂಡಿಗೆರೆ ತಾಲೂಕಿನಲ್ಲಿ ಯಥೇಚ್ಛವಾಗಿ ಮಳೆ ಸುರಿದಿದ್ದು ಕೊಟ್ಟಿಗೆಹಾರದಲ್ಲಿ ರಸ್ತೆ ಮಧ್ಯೆ ಮಳೆ ನೀರು ಹರಿದಿದೆ.

ತರೀಕೆರೆ ತಾಲೂಕಿನ ಭಾವಿಕೆರೆ ಗ್ರಾಮದಲ್ಲಿ ಮಳೆರಾಯ ಧಾರಾಕಾರವಾಗಿ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಜಾಗರ, ಮುತ್ತೋಡಿ, ಗಾಳಿಗುಡ್ಡೆ, ಮಲ್ಲಂದೂರು ಭಾಗದಲ್ಲೂ ಭಾರೀ ಮಳೆ ಸುರಿದಿದೆ. ಶೃಂಗೇರಿ ಹಾಗೂ ಕೊಪ್ಪದಲ್ಲಿ ಸಾಧಾರಣ ಮಳೆ ಸುರಿದರೆ, ಎನ್.ಆರ್.ಪುರ ತಾಲೂಕಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ.

ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಇಡೀ ಜಿಲ್ಲೆಯಲ್ಲಿ ಮಳೆ ಸುರಿದಿದೆ. ಇಂದಿನ ಈ ಮಳೆ ಜಿಲ್ಲೆಗೆ ಅಧಿಕೃತವಾಗಿ ಮಳೆಗಾಲ ಆರಂಭವಾಯಿತೆಂದು ಜನ ಭಾವಿಸಿ ಈ ವರ್ಷ ವರುಣದೇವ ಇನ್ನೇನು ಅವಾಂತರ ಸೃಷ್ಠಿಸಿ, ಅನಾಹುತ ಮಾಡುತ್ತಾನೋ ಎಂದು ಮಲೆನಾಡಿಗರು ಈಗಲೇ ಚಿಂತಾಕ್ರಾಂತರಾಗಿದ್ದಾರೆ. ಕಳೆದೆರಡು ವರ್ಷಗಳ ಕಾಲ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಸಾಕಷ್ಟು ಅನಾಹುತ ಸೃಷ್ಟಿಸಿತ್ತು.

Leave a Reply