ಅಕಾಲಿಕ ಮಳೆಗೆ ಕಾಫಿ ಬೆಳೆಗಾರರು ಕಂಗಾಲು

ಚಿಕ್ಕಮಗಳೂರು: ಕಳೆದೊಂದು ವಾರದಿಂದ ಮೋಡಕವಿದ ವಾತಾವರಣವಿದ್ದ ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಅಲ್ಲಲ್ಲೆ ಸಾಧಾರಣ ಮಳೆಯಾದರೆ, ಕೆಲ ಭಾಗ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿದಿದೆ. ಚಿಕ್ಕಮಗಳೂರು ನಗರದಲ್ಲೂ ಕೂಡ ನಿನ್ನೆ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿದಿದೆ. ಈ ಅಕಾಲಿಕ ಮಳೆಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ಹೈರಾಣಾಗಿದ್ದಾರೆ.

ಕಳೆದೊಂದು ವಾರದಿಂದಲೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿತ್ತು. ಒಂದೆಡೆ ಭಾರೀ ಗಾಳಿ-ಚಳಿ. ಮತ್ತೊಂದೆಡೆ ಮೋಡ ಕವಿದ ವಾತಾವರಣ. ಆಗಾಗ್ಗೆ ಸಾಧಾರಣ ಮಳೆ ಜಿಲ್ಲೆಯ ಜನರನ್ನ ಆತಂಕಕ್ಕೀಡು ಮಾಡಿತ್ತು. ಡಿಸೆಂಬರ್ ತಿಂಗಳಲ್ಲಿ ಮಳೆ ಸುರಿಯೋದು ತೀರಾ ವಿರಳ. ಆದರೆ ಈ ವರ್ಷ ಭಾರೀ ಗಾಳಿ-ಚಳಿಯೊಂದಿಗೆ ಆಗಾಗ್ಗೆ ಮಳೆ ಸುರಿಯುತ್ತಿರೋದು ಜಿಲ್ಲೆಯ ಕಾಫಿ ಬೆಳೆಗಾರರನ್ನ ಕಂಗಾಲಾಗುವಂತೆ ಮಾಡಿದೆ. ಈಗಾಗಲೇ ಕಾಫಿ ಹಣ್ಣಾಗಿದ್ದು ಕೊಯ್ಲಿಗೆ ಬಂದಿದೆ. ಈಗ ಕಾಫಿಯನ್ನ ಕೀಳದಿದ್ದರೆ ಉದುರಿ ಹೋಗುತ್ತೆ. ಕಿತ್ತರೆ ಒಣಗಿಸಲು ಬಿಸಿಲಿಲ್ಲ. ಜೊತೆಗೆ ಸಣ್ಣದಾಗಿ ಸುರಿಯುತ್ತಿರೋ ಮಳೆ ಕೂಡ ಬೆಳೆಗಾರರನ್ನ ಕಂಗಾಲಾಗಿಸಲೇ ಬರುತ್ತಿದ್ಯಾ ಎಂಬ ಆತಂಕ ಬೆಳೆಗಾರರದ್ದು.

ಈಗಾಗಲೇ ಕಾಫಿಯನ್ನ ಕೊಯ್ದಿರೋ ಬೆಳೆಗಾರರು ಕಾಫಿಯನ್ನ ಒಣಗಿಸಲು ಪರದಾಡುವಂತಾಗಿದೆ. ಸ್ವಲ್ಪ ಬಿಸಿಲು ಬಂತೆಂದು ಕಾಫಿ ಹಣ್ಣನ್ನ ಅಂಗಳದಲ್ಲಿ ಹರಡಿದರೆ, ನೋಡ-ನೋಡುತ್ತಿದ್ದಂತೆ ಮೋಡ, ತುಂತುರು ಮಳೆ. ಮಳೆಯ ಈ ಕಣ್ಣಾಮುಚ್ಚಲೇ ಆಟ ಬೆಳೆಗಾರರನ್ನ ಹೈರಾಣಾಗಿಸಿದೆ. ಅಲ್ಪಸ್ವಲ್ಪ ಒಣಗಿರೋ ಕಾಫಿ ಈ ಮಳೆಗೆ ನೆಂದರೆ ಕೊಳೆತು ಹೋಗುವ ಭಯ ಬೆಳೆಗಾರರದ್ದು. ಆಗಸ್ಟ್ ತಿಂಗಳ ಮೊದಲ 10 ದಿನ ಸುರಿದ ಮಹಾಮಳೆ-ಗಾಳಿಗೆ ಶೇಕಡ 40 ರಷ್ಟು ಕಾಫಿ ಉದುರಿತ್ತು. ಅಳಿದುಳಿದ ಬೆಳೆಯನ್ನ ಅಲ್ಲಿಂದ ರಕ್ಷಿಸಿಕೊಂಡು ಬಂದಿದ್ದರು. ಈಗ ಕಾಫಿ ಕೀಳಲು ಜನರಿಲ್ಲ. ಜೊತೆಗೆ ಗ್ರಾಮ ಪಂಚಾಯಿತಿ ಚುನಾವಣೆ ಬೇರೆ. ಹೇಗೋ ಕಷ್ಟಪಟ್ಟು ಕೀಳಿಸಿ ತುಂದು ಮನೆ ಮುಂದೆ ಹಾಕಿದರೆ ಒಣಗಿಸಲು ಬಿಸಿಲಿಲ್ಲ. ಜೊತೆಗೆ ಮಳೆ ಬೇರೆ. ಪ್ರಕೃತಿಯ ವೈಚಿತ್ರ್ಯಕ್ಕೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ನಿನ್ನೆ ಸಂಜೆಯಿಂದ ಜಿಲ್ಲಾದ್ಯಂತ ಅಲ್ಲಲ್ಲೇ ತುಸು ಹೆಚ್ಚಾಗೆ ಮಳೆ ಸುರಿದಿದ್ದು ಇದೀಗ, ಕಾಫಿ ಬೆಳೆಗಾರರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.

Comments

Leave a Reply

Your email address will not be published. Required fields are marked *