ಮಂಡ್ಯ: ಕಾಡಾನೆ ಓಡಿಸುವ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಶಿವನಂಜಯ್ಯ (30) ಮೃತ ಫಾರೆಸ್ಟ್ ವಾಚರ್. ಕೂನನಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಓಡಿಸುವ ವೇಳೆ ಈ ಘಟನೆ ನಡೆದಿದೆ. ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವರ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಶಿವನಂಜಯ್ಯ ಸಾವನ್ನಪ್ಪಿದ್ದಾರೆ.

ಮೃತ ಶಿವನಂಜಯ್ಯ ಗುತ್ತಿಗೆ ಅಧಾರದ ಮೇಲೆ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಶಿಂಷಾ ಅರಣ್ಯಪ್ರದೇಶದಿಂದ ಬಂದಿದ್ದ ಹತ್ತು ಕಾಡಾನೆಗಳು ಗ್ರಾಮದ ತೋಪೊಂದರಲ್ಲಿ ಬೀಡುಬಿಟ್ಟಿದ್ದವು. ಹೀಗಾಗಿ ಅರಣ್ಯ ಸಿಬ್ಬಂದಿ ಆನೆಗಳನ್ನು ಬಂದೂಕು ಶಬ್ದದಿಂದ ಬೆದರಿಸಿ ವಾಪಸ್ ಕಾಡಿಗಟ್ಟಲು ಮುಂದಾಗಿದ್ದರು.

ಆದರೆ ಆನೆಗಳು ಜನರ ಕಿರುಚಾಟಕ್ಕೆ ಹೆದರಿ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದವು. ಈ ವೇಳೆ ಭಯದಿಂದ ಓಡುವ ವೇಳೆ ಫಾರೆಸ್ಟ್ ಗಾರ್ಡ್ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ. ಪರಿಣಾಮ ಶಿವನಂಜಯ್ಯ ಬೆನ್ನಿಗೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಕುರಿತು ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply