ಕಾಂಗ್ರೆಸ್ ನಾಯಕರ ನಡುವೆ ‘ಸಿಎಂ’ ವಾರ್ – ಸಿದ್ದರಾಮಯ್ಯ ಬಣಕ್ಕೆ ಡಿಕೆಶಿ ಪರೋಕ್ಷ ಟಕ್ಕರ್

ಬೆಂಗಳೂರು: ಕಾಂಗ್ರೆಸ್ ನಾಯಕರ ನಡುವೆ `ಸಿಎಂ’ ವಾರ್ ನಡೆಯುತ್ತಿದೆ. ಮುಂದೆ ಚುನಾವಣೆ ನಡೆದು ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಆಗಲು ಒಂದ್ಕಡೆ ಸಿದ್ದರಾಮಯ್ಯ, ಇನ್ನೊಂದ್ಕಡೆ ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ ಈಗಿನಿಂದಲೇ ಪ್ರಯತ್ನ ನಡೆಸಿರೋದು ಬಹಿರಂಗ ಸತ್ಯ. ಅವಕಾಶ ಸಿಕ್ಕಾಗಲೆಲ್ಲಾ ಹಿಂಬಾಲಕರು, ತಮ್ಮ ತಮ್ಮ ನಾಯಕರನ್ನು ‘ಮುಂದಿನ ಸಿಎಂ’ ಅಂತಾ ಬಹಿರಂಗವಾಗಿ ಹೇಳೋದನ್ನು ನಿಲ್ಲಿಸುತ್ತಿಲ್ಲ. ಇದರಿಂದ ಇಬ್ಬರು ನಾಯಕರ ನಡುವೆ ಪರೋಕ್ಷ ವಾರ್ ನಡೀತಿದೆ. ಇದು ಇವತ್ತು ಸ್ಫೋಟಗೊಂಡಿದೆ.

ಇದು ನನಗೆ ಅಗತ್ಯ ಇಲ್ಲ: ಮೊನ್ನೆಯಷ್ಟೇ ಮೈಸೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್, ಮುಂದಿನ ಸಿಎಂ ಸಿದ್ದರಾಮಯ್ಯ ಅಂತಾ ಬಹಿರಂಗವಾಗಿ ಹೇಳಿದರು. ಇದರಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದ ಡಿಕೆ ಶಿವಕುಮಾರ್, ಇವತ್ತು ಪರೋಕ್ಷವಾಗಿ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ನೀಡಿದರು. ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತಾಡಿದ ಡಿಕೆಶಿ, ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಇರಲಿ ಅಂತಾ ಕಾರ್ಯಕರ್ತರಿಗೆ ಕರೆ ನೀಡಿದರು. ನಾನು ಇಲ್ಲಿಗೆ ಬಂದಾಗ ‘ಡಿಕೆಶಿ ಮುಂದಿನ ಸಿಎಂ’ ಅಂತ ಜೈಕಾರ ಹಾಕಿದರು. ಇದು ನನಗೆ ಅಗತ್ಯ ಇಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಮಾತ್ರ ನನಗೆ ಮುಖ್ಯ ಎನ್ನುತ್ತಾ ಟಕ್ಕರ್ ನೀಡಿದರು.

ಮತ್ತೊಮ್ಮೆ ಸಿಎಂ ಆಗೋ ಆಸೆ: ಇದಕ್ಕೆಲ್ಲಾ ಕೇರ್ ಮಾಡದ ಸಿದ್ದರಾಮಯ್ಯ, ಮತ್ತೊಮ್ಮೆ ಪರೋಕ್ಷವಾಗಿ ಸಿಎಂ ಆಗೋ ಬಯಕೆಯನ್ನು ವ್ಯಕ್ತಪಡಿಸಿದರು. ಬಿಎಸ್‍ವೈ ಆಡಳಿತ ಟೀಕಿಸುವ ನೆಪದಲ್ಲಿ ಮನದಾಳದ ಆಸೆಯನ್ನು ಮತ್ತೊಮ್ಮೆ ಹೊರ ಹಾಕಿದರು. ಯಾವುದಕ್ಕೆ ಕೇಳಿದ್ರೂ ಹಣ ಇಲ್ಲ ಅಂತಾ ಯಡಿಯೂರಪ್ಪ ಹೇಳ್ತಾರೆ. ಹಣ ಇಲ್ಲ ಅಂದ್ಮೇಲೆ ಯಾಕಿದೀಯಪ್ಪ ಯಡಿಯೂರಪ್ಪ? ದುಡ್ಡಿಲ್ಲಾಂದ್ರೆ ಕುರ್ಚಿ ಬಿಟ್ಟು ಇಳಿ ಮತ್ತೆ, ಆಗ ನಾವ್ಯಾರಾದ್ರೂ ಬರ್ತೀವಿ ಎಂದು ಹೇಳಿದರು.

ಕಾಂಗ್ರೆಸ್ ಸೇರಲು ಆಫರ್: ವಿಧಾಸನಭೆ ಚುನಾವಣೆಗೆ ಇನ್ನೂ ಎರಡು ವರ್ಷ ಟೈಮ್ ಇದೆ. ಆದರೆ ಕಾಂಗ್ರೆಸ್ ಈಗಿನಿಂದಲೇ ತಯಾರಿ ನಡೆಸಿದಂತೆ ಕಾಣಿಸುತ್ತಿದೆ. ಇದರ ಭಾಗವಾಗಿ, ಯಾರು ಬೇಕಿದ್ರೂ ಷರತ್ತು ರಹಿತವಾಗಿ ಕಾಂಗ್ರೆಸ್ ಸೇರಬಹುದು. ಸ್ವಾಗತ ಮಾಡ್ತೀವಿ ಎನ್ನುವ ಮೂಲಕ ಜೆಡಿಎಸ್, ಬಿಜೆಪಿ ನಾಯಕರಿಗೆ ಡಿಕೆ ಶಿವಕುಮಾರ್ ಓಪನ್ ಆಫರ್ ನೀಡಿದರು.

ಟೋಪಿ ಹಾಕಿಬಿಟ್ಯಲ್ಲಪ್ಪಾ ಮೋದಿ: ಇದೇ ವೇಳೆ, ಮಾತಾಡಿದ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಈಗ ಕೆಪಿಸಿಸಿ ಕಾರ್ಯಾಧ್ಯಕ್ಷರು. ರಾಮಲಿಂಗಾರೆಡ್ಡಿ ಈಗ ಬೆಂಗಳೂರಿಗೆ ಸೀಮಿತರಾದ ನಾಯಕ ಅಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಬೇಕಾಗುತ್ತೆ ಅಂತಾ ಪರೋಕ್ಷವಾಗಿ ಕ್ಲಾಸ್ ತೆಗೆದುಕೊಂಡರು. ಮೋದಿ ಗಡ್ಡದ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು. ಮೋದಿ ಗಡ್ಡ ಬೆಳೆಸಿದ್ದು ಮೊದಲಿನ ಮುಖ ತೋರಿಸಬಾರದು ಅಂತ.. ಅಚ್ಚೇದಿನ್ ಆಯೇಗಾ ಅಂತ ಅಧಿಕಾರಕ್ಕೆ ಬಂದರು. ನಾ ಖಾವೂಂಗಾ ನಾ ಖಾನೇ ದೂಂಗಾ ಅಂದ್ರಲ್ಲಪ್ಪಾ ಮೋದಿ. ಹೀಗೆ ಹೇಳಿ ಜನರಿಗೆ ಟೋಪಿ ಹಾಕಿಬಿಟ್ಯಲ್ಲಪ್ಪಾ ಮೋದಿ. ಇದೇನಾ ನಿಮ್ಮ ಅಚ್ಛೇ ದಿನ್ ಅಂತಾ ಪ್ರಶ್ನಿಸಿದರು.

Comments

Leave a Reply

Your email address will not be published. Required fields are marked *